ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೊನೊಗ್ರಾಮ್ ಬಳಸಿ ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ವಾಹನದ ಆರ್ಸಿ ಬುಕ್ಗಳನ್ನು ತಯಾರಿಸುತ್ತಿದ್ದ 10 ಜನ ವಂಚಕರನ್ನು ಬಂಧಿಸಲಾಗಿದೆ.
ಬಂಧಿತರಿಂದ ಸಾವಿರಾರು ನಕಲಿ ಐಡಿ ಕಾರ್ಡುಗಳು ಮತ್ತು ಲ್ಯಾಪ್ಟಾಪ್ ಪ್ರಿಂಟರ್ ವಶಕ್ಕೆ ಪಡೆಯಲಾಗಿದೆ. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಮಲೇಶ್ ಎಂಬ ವ್ಯಕ್ತಿಯು ಸರ್ಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ತನ್ನ ಮನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು ಸಾರ್ವಜನಿಕರಿಗೆ ವಿತರಿಸಬೇಕಾಗಿರುವ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವಾಹನದ ಆರ್ಸಿ ಬುಕ್ ಮತ್ತು ಡ್ರೈವಿಂಗ್ ಲೈಸನ್ಸ್ ಅನಧಿಕೃತವಾಗಿ ಪ್ರಿಂಟ್ ಮಾಡಿ ಬೇರೆ ಬೇರೆ ವ್ಯಕ್ತಿಗಳಿಗೆ ಸಾಗಿಸುತ್ತಿದ್ದನಂತೆ.
ಈ ಮಾಹಿತಿ ಸಂಗ್ರಹಿಸಿದ ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದ ತಂಡ ಇಂದು ದಾಳಿ ಮಾಡಿದೆ. ಮೊದಲು ಕಮಲೇಶ ಕುಮಾರ್ ಭವಾಲಿಯಾ ಎಂಬಾತನನ್ನು ಬಂಧಿಸಿದ್ದು, ಈತನ ಮನೆಯಲ್ಲಿ ಮಷಿನ್ ಬಳಸಿಕೊಂಡು ಈ ಕೃತ್ಯ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ಈತನ ಮಾಹಿತಿ ಮೇರೆಗೆ ಲೊಕೇಶ್, ಸುದರ್ಶನ್, ನಿರ್ಮಲ್, ದರ್ಶನ್, ಶ್ರೀಧರ, ಚಂದ್ರಪ್ಪ, ಅಭಿಲಾಷ್ ಹಾಗೂ ತೇಜಸ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಸದ್ಯ ಈ ಆರೋಪಿಗಳ ಬಳಿಯಿಂದ 9000 ಆಧಾರ್ ಕಾರ್ಡ್, 9000 ಪ್ಯಾನ್ ಕಾರ್ಡ್, 12,200 ಆರ್ಸಿ ಬುಕ್, 250 ನಕಲಿ ಆರ್ಸಿ ಕಾರ್ಡ್, 6240 ನಕಲಿ ಚುನಾವಣಾ ಗುರುತಿನ ಚೀಟಿ, ಹೆಸರು, ವಿಳಾಸ, ಸರ್ಕಾರದ ಚಿಹ್ನೆಗಳನ್ನು ಮುದ್ರಿಸಿರುವ 28,000 ಚುನಾವಣಾ ಗುರುತಿನ ಕಾರ್ಡ್, ಮೂರು ಲ್ಯಾಪ್ಟಾಪ್, 3 ಪ್ರಿಂಟರ್ ಜೊತೆಗೆ ನಗದು ಹಣ ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ಕಳ್ಳತನದ ವಾಹನಗಳಿಗೂ ಆರ್ಸಿ ಬುಕ್ ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳ ಪೈಕಿ ಲೋಕೇಶ್ ಹಾಗೂ ಮತ್ತಿತರ ಆರೋಪಿಗಳು ಕೆಲವು ಸರ್ಕಾರಿ ಇಲಾಖೆಯ ಕಾರ್ಡುಗಳನ್ನು ಪ್ರಿಂಟ್ ಮಾಡಿಕೊಡಲು ಅಲ್ಲಿಂದ ಡೇಟಾವನ್ನು ಗುತ್ತಿಗೆ ನೀಡಿರುವ ಕಂಪನಿಯ ನೌಕರರಿಂದ ತೆಗೆದು ಪರ್ಯಾಯವಾಗಿ ಕಾರ್ಡ್ ಮುದ್ರಿಸಿ ವಿತರಣೆ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ಆರೋಪಿಗಳು ಕಳೆದ ಎರಡು ವರ್ಷದಿಂದ ಈ ಕೃತ್ಯದಲ್ಲಿ ತೊಡಗಿದ್ರು ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.