ಬೆಂಗಳೂರು: ಬಿಳಿ ಬಣ್ಣದ ಅಂಗಿ ಮತ್ತು ಕಚ್ಚೆ ಪ್ಯಾಂಟ್ ಧರಿಸಿರುವ ಈ ಪೋರನ ಬಗ್ಗೆ ನಿಮಗೇನಾದರೂ ತಿಳಿದಿದೆಯಾ? ಅಲ್ಲಾ,,, ಈ ಮುದ್ದು ಕೃಷ್ಣನ ವೇಷ ಹಾಕಿ ನಿಮ್ಮ ಮನ ಕದಿಯಲು ಬಂದ ಕಂದಮ್ಮನೇನಾದರೂ ನೋಡಿದ್ದೀರಾ? ಉತ್ತರ ಗೊತ್ತಿಲ್ಲದಿದ್ದರೆ ಇಲ್ಲಿ ಕೇಳಿ, ಅವರು ಬೇರಾರು ಅಲ್ಲ, ಕುಂದಾಪುರದ ಕುವರ ಬಿಗ್ ಬಾಸ್ ಸೀಸನ್ 7 ಸ್ಪರ್ಧಿ.

ಬಾಲ್ಯದ ಫೋಟೋಗಳಲ್ಲಿ ತುಂಬಾ ಮುದ್ದು ಮುದ್ದಾಗಿ ಕಾಣುತ್ತಿರುವ ಶೈನ್ ಶೆಟ್ಟಿ ಈಗಲೂ ಕೂಡಾ ಅಷ್ಟೇ ಮುದ್ದಾಗಿರುವುದು ನಿಜ!. ಬಾಲಾಜಿ ಟೆಲಿಫಿಲಂ ಅವರ ಕ್ರಿಯೇಟಿವ್ ಎಕ್ಸಲೆನ್ಸ್ ಇನ್ ಸ್ಟಿಟ್ಯೂಟ್ ನಲ್ಲಿ ಆ್ಯಕ್ಟಿಂಗ್ ಡಿಪ್ಲೋಮಾ ಪದವಿ ಪಡೆದಿರುವ ಶೈನ್ ಶೆಟ್ಟಿ ಕಾಲೇಜು ವಿದ್ಯಾರ್ಥಿ ಯಾಗಿದ್ದಾಗಲೇ ಸ್ಥಳೀಯ ವಾಹಿನಿಯಲ್ಲಿ ನಿರೂಪಕರಾಗಿ ಮನೆ ಮಾತಾಗಿದ್ದರು.

ನಟನಾ ತರಬೇತಿ ಬಳಿಕ ಮನೆದೇವರು ಧಾರಾವಾಹಿಯಲ್ಲಿ ನಟಿಸಿದ್ದ ಈ ಚಾಕಲೇಟ್ ಹುಡುಗ ಮುಂದೆ ಕೋಗಿಲೆ ಧಾರಾವಾಹಿಯಲ್ಲೂ ಅಭಿನಯಿಸಿದ್ದರು. ಅನಂತರ ಕನಕ, ಮಹಾಭಾರತ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಶೈನ್ ಅವರಿಗೆ ಹೆಸರು ತಂದುಕೊಟ್ಟಿದ್ದು ಮೀರಾ ಮಾಧವ ಧಾರಾವಾಹಿ. ಅದರಲ್ಲಿ ನಾಯಕ ಮಾಧವ ಆಲಿಯಾಸ್ ಮ್ಯಾಡಿ ಆಗಿ ನಟಿಸಿದ್ದ ಶೈನ್ ಅವರು ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಂದನ್ ಪಾತ್ರ ಕ್ಕೂ ಜೀವ ತುಂಬಿದ್ದರು.

ಕ ಎನ್ನುವ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿರುವ ಶೈನ್ ಅವರು ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ ಎಂಬ ರಿಯಾಲಿಟಿ ಶೋನ ನಿರೂಪಕರಾಗಿಯೂ ಸೈ ಎನಿಸಿಕೊಂಡಿದ್ದರು. ಮುಂದೆ ನಟನಾ ರಂಗದಲ್ಲಿ ಅವಕಾಶಗಳ ಕೊರತೆ ಉಂಟಾದಾಗ ಒಮ್ಮೆ ಕಂಗಾಲಾದ ಶೈನ್ ಅವರು ಎದೆಗುಂದಲಿಲ್ಲ. ಬದಲಿಗೆ ರೋಡ್ ಸೈಡ್ನಲ್ಲಿ ಒಂದು ಗಾಡಿ ಅಂಗಡಿ ತೆಗೆದು ವ್ಯಾಪಾರ ಆರಂಭಿಸಿದರು. ಈ ನಡುವೆ ಬಿಗ್ ಬಾಸ್ ಮನೆಯೊಳಗೆ ಹೋಗುವ ಆಫರ್ ಅವರಿಗೆ ದೊರೆತಿದ್ದು, ಇದೀಗ ದೊಡ್ಮನೆಯೊಳಗೆ ತಮ್ಮ ಅದೃಷ್ಟ ಪರೀಕ್ಷೆಗೆ ತಯಾರಾಗಿದ್ದಾರೆ.