ಬೆಂಗಳೂರು: ಉಪಸಮರವೆಂದೇ ಬಿಂಬಿತವಾಗಿದ್ದ ಹದಿನೈದು ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಗುರುವಾರ ಮುಗಿದಿದ್ದು, ಅಭ್ಯರ್ಥಿಗಳ ಭವಿಷ್ಯ ಡಿ.9 ರಂದು ಹೊರಬೀಳಲಿದೆ. ಆದ್ರೆ ಇದೀಗ ರಾಜಕೀಯ ಪಡಸಾಲೆಯಲ್ಲಿ ಮೂರು ಪಕ್ಷಗಳ ನಾಯಕರು ತಮ್ಮ ಉಳಿವಿನ ಬಗ್ಗೆ ದೊಡ್ಡ ಆತ್ಮವಿಶ್ವಾಸವನ್ನೇ ಹೊಂದಿದ್ದು, ಸರ್ಕಾರಕ್ಕೆ ಯಾವುದೇ ತೊಂದರೆ ಎದುರಾಗದಷ್ಟು ಸ್ಥಾನ ಬರಲಿದೆ ಎಂದು ಬಿಜೆಪಿ ಲೆಕ್ಕಹಾಕುತ್ತಿದ್ದರೆ, ಅನರ್ಹರ ಸೋಲಿಗೆ ಟೊಂಕಕಟ್ಟಿ ನಿಂತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಹುತೇಕ ಆ ದಾರಿಯಲ್ಲಿ ಯಶಸ್ವಿಯಾಗಿದ್ದೇವೆ ಎಂಬ ವಿಶ್ವಾಸದಲ್ಲಿವೆ.
ಹೊಸಕೋಟೆ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಅಭ್ಯರ್ಥಿಗಳ ಬೆನ್ನಿಗೆ ನಿಂತು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ಬಿಜೆಪಿ ನಂಬಿಕೊಂಡಿದೆ. ಇನ್ನು ಕಾಂಗ್ರೆಸ್ ವಿಚಾರದಲ್ಲಿ ಅನರ್ಹರ ಕುರಿತು ಪ್ರಚಾರ ಕೆಲಸ ಮಾಡಿದ್ದು, ಒಂದೆರಡು ಕ್ಷೇತ್ರ ಬಿಟ್ಟರೆ ಉಳಿದ ಕಡೆ ಉತ್ತಮ ಪೈಪೋಟಿ ಕೊಡಲಾಗಿದೆ. ಸಮೀಕ್ಷೆ ಎಣಿಸಿದಷ್ಟು ಕಡಿಮೆ ಸ್ಥಾನ ಬರುವುದಿಲ್ಲ. 6 ಸ್ಥಾನಕ್ಕಿಂತ ಹೆಚ್ಚು ಗಳಿಸುತ್ತೇವೆ ಎಂದು ಆ ಪಕ್ಷದ ನಾಯಕರು ಆಶಾ ಭಾವನೆಯಲ್ಲಿದ್ದಾರೆ.
ಕೆ.ಆರ್.ಪೇಟೆ, ಹುಣಸೂರು ಹಾಗೂ ರಾಣೆಬೆನ್ನೂರು ಕ್ಷೇತ್ರಗಳಲ್ಲಿ ಗೆಲುವು ಕಷ್ಟ ಎನಿಸುವ ವರದಿ ಬಿಜೆಪಿ ನಾಯಕರ ಕೈಸೇರಿದೆ. ಇನ್ನು ಕಾಗವಾಡ ಮತ್ತು ಶಿವಾಜಿನಗರದಲ್ಲಿ ಪ್ರಬಲ ಸ್ಪರ್ಧೆ ಎದುರಾಗಿದ್ದು, ಕೊನೆ ಹಂತದಲ್ಲಿ ಹೊಸಕೋಟೆ ಕೈಹಿಡಿಯಬಹುದೆಂಬ ನಿರೀಕ್ಷೆ ಇದೆ. ಉಳಿದಂತೆ ಗೋಕಾಕ್, ಅಥಣಿ, ಹಿರೇಕೆರೂರು, ಯಲ್ಲಾಪುರ, ಮಹಾಲಕ್ಷ್ಮಿಲೇಔಟ್, ಯಶವಂತಪುರ, ಕೆ.ಆರ್. ಪುರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ಆತ್ಮವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ ಎನ್ನಲಾಗ್ತಿದೆ.
ಅದೇ ರೀತಿ ಕಾಂಗ್ರೆಸ್ ಮೊದಲಿನಿಂದಲೂ ಕೆ.ಆರ್. ಪುರ ಹಾಗೂ ಯಶವಂತಪುರ ಕ್ಷೇತ್ರಗಳಲ್ಲಿ ಗೆಲುವಿಗೆ ಪ್ರಯತ್ನ ಮಾಡಿಲ್ಲ. ಪ್ರಬಲ ಪೈಪೋಟಿ ನೀಡಿರುವ ಕೆ.ಆರ್.ಪೇಟೆ, ಹೊಸಕೋಟೆ, ಚಿಕ್ಕಬಳ್ಳಾಪುರ, ಹಿರೇಕೆರೂರಿನಲ್ಲಿ ಗೆದ್ದರೂ ಗೆಲ್ಲಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರಿಗಿದೆ. ಉಳಿದಂತೆ ಹುಣಸೂರು, ಮಹಾಲಕ್ಷ್ಮಿಲೇಔಟ್, ಗೋಕಾಕ್, ಅಥಣಿ, ಕಾಗವಾಡ, ಯಲ್ಲಾಪುರ, ರಾಣೆಬೆನ್ನೂರು ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂಬ ಮಾಹಿತಿ ಕಾಂಗ್ರೆಸ್ ಗೆ ಸಿಕ್ಕಿದೆ ಎಂದು ಹೇಳಲಾಗ್ತಿದೆ.
ಇನ್ನು, ಜೆಡಿಎಸ್ ಸಹ ಭಾರಿ ವಿಶ್ವಾಸವನ್ನು ಇಟ್ಟುಕೊಂಡಿದ್ದು, ಹುಣಸೂರು, ಕೆ.ಆರ್. ಪೇಟೆ, ಯಶವಂತಪುರ, ಗೋಕಾಕ್ನಲ್ಲಿ ಗೆಲ್ಲಬಹುದೆಂಬ ಊಹೆಯಲ್ಲಿರುವ ನಾಯಕರು, ಉಳಿದೆಡೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದು ತಿಳಿದುಬಂದಿದೆ. ಒಟ್ಟಾರೆ, ಮೂರು ಪಕ್ಷಗಳು ಒಂದೊಂದು ರೀತಿಯ ಲೆಕ್ಕಾಚಾರ ಹಾಕಿಕೊಂಡಿವೆ. ಆದರೆ, ಇದಕ್ಕೆಲ್ಲಾ ಉತ್ತರ ಡಿಸೆಂಬರ್ 9 ರಂದು ಸಿಗಲಿದೆ.