ಬೆಂಗಳೂರು: ಸರ್ಕಾರದ ಆಯಕಟ್ಟಿನ ಜಾಗಗಳಲ್ಲಿ ಅಧಿಕಾರಿಗಳನ್ನು ವ್ಯವಸ್ಥಿತವಾಗಿ ಕೂರಿಸಬೇಕು ಅಂತ ಸಂಚು ಮಾಡಿದ್ದರು. ಭಾರತೀಯತೆ ನಾಶ ಮಾಡುವ ಉದ್ದೇಶ ಇತ್ತು. ಇಷ್ಟೆಲ್ಲ ಮಾಹಿತಿ ಇದ್ದರೂ ಕೇರಳದಲ್ಲಿ ಕಾಂಗ್ರೆಸ್ ಸಿಎಂ ಆಗಿದ್ದವರು ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದರು. ಇಷ್ಟಾದರೂ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಉಗ್ರ ಭಾಗ್ಯ ಯೋಜನೆ ಕೊಟ್ಟಿದ್ದು ಈ ನಾಡಿನ ದುರಂತ.
ಉಗ್ರಭಾಗ್ಯ ಯೋಜನೆ ಮೂಲಕ 175 ಪಿಎಫ್ಐ, ಕೆಎಫ್ಡಿ ಕಾರ್ಯಕರ್ತರ ಮೇಲಿನ ಮೊಕದ್ದಮೆ ವಾಪಸ್ ಪಡೆದಿದ್ದರು. ಉಗ್ರಭಾಗ್ಯ ಯೋಜನೆಯಿಂದಾನೇ 32 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆ ಆಯ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಪಕ್ಷದ ಶಾಸಕನ ಮನೆಗೆ ಬೆಂಕಿ ಹಾಕಿದ್ದರು. ಕಾಂಗ್ರೆಸ್ ಇದನ್ನು ಸ್ಮರಿಸಿಕೊಳ್ಳಲಿ. ಸಂವಿಧಾನ ಅಪಾಯದಲ್ಲಿದೆ, ಅಂಬೇಡ್ಕರ್ ಚಿಂತನೆ ಅಪಾಯದಲ್ಲಿವೆ ಅಂತ ಕೆಲವರು ಆರೋಪ ಮಾಡುತ್ತಾರೆ. ಅಂಬೇಡ್ಕರ್ ಹೆಸರು ಇಟ್ಕೊಂಡು ಮತಾಂಧತೆ ಬೆಂಬಲಿಸುತ್ತಾರೆ. ಇಂಥ ಆರೋಪ ಮಾಡೋರು ಅಂಬೇಡ್ಕರ್ ಬರೆದಿರುವ ಪುಸ್ತಕಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲಿ ಎಂದು ಸಲಹೆ ಕೂಡಾ ನೀಡಿದರು.
ಇಂತಹವರ ಮಾಹಿತಿ ನೀಡುವುದು ಸಮಾಜದ ಜವಾಬ್ದಾರಿ : ರಾಷ್ಟ್ರಿಯ ಹಿತಾಸಕ್ತಿ ಮೀರಿದ ಮಾನಸಿಕತೆ ಪಿಎಫ್ಐನವರಿಗಿದೆ. ಅಂಬೇಡ್ಕರ್ ಹೆಸರು ಹೇಳಿಕೊಂಡು ರಾಜಕೀಯ, ಸಾರ್ವಜನಿಕ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಂಡವರು, ಅಂಬೇಡ್ಕರ್ ಪುಸ್ತಕಗಳನ್ನು ಓದಿಕೊಳ್ಳಲಿ. ಪಿಎಫ್ಐ ಬ್ಯಾನ್ ಸಕಾಲ ನಿರ್ಧಾರ. ರಾಷ್ಟ್ರಭಕ್ತ ಮುಸಲ್ಮಾನರು ದನಿ ಎತ್ತಬೇಕು. ಬ್ಯಾನ್ ಕಾರಣಕ್ಕೆ ಎಲ್ಲವೂ ಸಮಾಪ್ತಿ ಆಗಿಲ್ಲ. ಹತಾಶೆಯಿಂದ ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆ ಇದೆ. ಇಂಥವರ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡುವ ಹೊಣೆಗಾರಿಕೆ ಸಮಾಜಕ್ಕಿದೆ ಎಂದರು.
ಸಿದ್ದರಾಮಯ್ಯಗೆ ಬೌದ್ಧಿಕ ಅಪ್ರಮಾಣಿಕತೆ ಇದೆ : ಆರ್‌ಎಸ್ಎಸ್ ಅನ್ನೂ ಬ್ಯಾನ್ ಮಾಡಲಿ ಎಂಬ ಸಿದ್ದರಾಮಯ್ಯ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿದ್ದರಾಮಯ್ಯ ಸುಣ್ಣ ಮತ್ತು ಬೆಣ್ಣೆ ಯಾವುದು ಅಂತ ಗುರುತಿಸಲಾರದ ಸ್ಥಿತಿಗೆ ಬಂದಿದ್ದಾರೆ. ಹೀಗಾಗಿ ಈ ತರ ಮಾತನಾಡುತ್ತಿದ್ದಾರೆ. ಆರ್‌ಎಸ್ಎಸ್ ವಿರುದ್ಧ ದಾಖಲೆ ಇಟ್ಟು ಮಾತಾಡಲಿ. ರಾಜಕೀಯ ತೆವಲು ತೀರಿಸಿಕೊಳ್ಳಲು ಸಿದ್ದರಾಮಯ್ಯ ಮಾತಾಡಿದ್ದಾರೆ. ಸಿದ್ದರಾಮಯ್ಯಗೆ ಬೌದ್ಧಿಕ ಅಪ್ರಮಾಣಿಕತೆ ಇದೆ ಎಂದು ಟೀಕಿಸಿದರು.
ರಾಷ್ಟ್ರಭಕ್ತರ ಹತ್ಯೆಗೆ ಸಂಚು : ನಿನ್ನೆ ಕೇಂದ್ರ ಸರ್ಕಾರ ಪಿಎಫ್ಐ ಸೇರಿ ಅದರ ಎಂಟು ಅಂಗಸಂಸ್ಥೆಗಳನ್ನು ನಿಷೇಧಿಸಿದೆ. ಕೇಂದ್ರದ ಕ್ರಮವನ್ನು ನಾನು ಸ್ವಾಗತಿಸುತ್ತೇನೆ. ಪಿಎಫ್ಐ ಸಿಮಿಯ ಇನ್ನೊಂದು ಅವತಾರ. ಕೇರಳದಲ್ಲಿ ಉಪನ್ಯಾಸಕರೊಬ್ಬರನ್ನು ವಿದ್ಯಾರ್ಥಿಗಳೆದುರೇ ಕೊಂದು ಹಾಕುತ್ತಾರೆ. ಆಗಿನ ಒಮನ್ ಚಾಂಡಿ ಸರ್ಕಾರ ಹಲವರ ಹತ್ಯೆಗೆ ಪಿಎಫ್ಐ ಕಾರಣವಾಗಿದೆ, ನಿಷೇಧ ಮಾಡಿ ಅಂತ ಅಂತ ಅಫಿಡವಿಟ್ ಸಲ್ಲಿಸಿದ್ದರು. ಬಿಹಾರದಲ್ಲಿ ಮೋದಿಯವರ ಹತ್ಯೆಗೆ ಸಂಚು ಮಾಡಿದ್ದರು ಅಂತ ತನಿಖೆಯಿಂದ ಗೊತ್ತಾಗಿದೆ. ರಾಷ್ಟ್ರಭಕ್ತರನ್ನು ಗುರಿಯಾಗಿಸಿಕೊಂಡು ಹತ್ಯೆ ನಡೆಸುವ ಸಂಚು ನಡೆಸಿದ್ದರು ಎಂದರು.
ಮೊಗಲ್‌ಸ್ಥಾನ್ ಕಲ್ಪನೆ : 2047 ರೊಳಗೆ ಭಾರತವನ್ನು ಮೊಗಲ್‌ಸ್ಥಾನ್ ಕಲ್ಪನೆ ಮೂಲಕ ಭಾರತ ವಿಭಜನೆಯ ಸಂಚು ರೂಪಿಸಿತ್ತು. ಆ ಮೂಲಕ ಭಾರತಕ್ಕೆ ವಿಷವುಣಿಸುವ ಸಂಚನ್ನು ಪಿಎಫ್ಐ ಮತ್ತು ಅದರ ಅಂಗಸಂಸ್ಥೆಗಳು ಮಾಡಿದ್ದವು. ಈ ಹಿಂದೆಯೇ 2001 ರಲ್ಲಿ ಭಾರತದಲ್ಲಿ ಸಿಮಿ ಬ್ಯಾನ್ ಆಗಿತ್ತು. ವಾಜಪೇಯಿ ಸರ್ಕಾರ ಸಿಮಿಯನ್ನು ಬ್ಯಾನ್ ಮಾಡಿತ್ತು. ನಂತರ ಸಿಮಿಯ ಹೊಸ ಅವತಾರವಾಗಿ ಪಿಎಫ್ಐ ಹುಟ್ಟಿಕೊಂಡಿತು. ಇದರ ರಾಜಕೀಯ ಸಂಸ್ಥೆಯಾಗಿ ಎಸ್ಡಿಪಿಐ ಕಾರ್ಯ ನಿರ್ವಹಿಸ್ತಿದೆ ಎಂದರು.
ಇದನ್ನೂ ಓದಿ : ಪಿಎಫ್ಐ ಬ್ಯಾನ್ ಮಾಡಿರುವುದು ಮುಸ್ಲಿಮರಲ್ಲಿಯೂ ಖುಷಿ ಮೂಡಿಸಿದೆ: ಚಕ್ರವರ್ತಿ ಸೂಲಿಬೆಲೆ