ಬೆಂಗಳೂರು : ಅಣ್ಣನ ಕೊಲೆಯ ಪ್ರತೀಕಾರಕ್ಕಾಗಿ ನಡು ರಸ್ತೆಯಲ್ಲೇ ಅತ್ತಿಗೆಯನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರು ಉತ್ತರ ತಾಲೂಕು ಚಿಕ್ಕಬಿದರಕಲ್ಲು ಗ್ರಾಮದ ಬಳಿ ನಡೆದಿದೆ.
ನಿನ್ನೆ ಸಂಜೆ 5 ಗಂಟೆಯ ಸಮಯದಲ್ಲಿ ಬೈಕ್‌ನಲ್ಲಿ ಬರುತ್ತಿದ್ದವರ ಮೇಲೆ ಮಚ್ಚು-ಲಾಂಗ್‌ಗಳಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಗಾಯಳುಗಳನ್ನ ರಾಯಚೂರು ಜಿಲ್ಲೆಯ ಗಂಗಮ್ಮ ಮತ್ತು ಗಡ್ಡಪ್ಪ ಎಂದು ತಿಳಿದು ಬಂದಿದ್ದು, ಗಂಗಮ್ಮ ತೀವ್ರವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಘಟನೆಗೆ ಹಳೆಯ ವೈಷಮ್ಯವೇ ಕಾರಣವೆಂದು ತಿಳಿದು ಬಂದಿದೆ. ಕಳೆದ 15 ವರ್ಷಗಳ ಹಿಂದೆ ಅಂಬರೀಶ್ ಎಂಬುವನನ್ನ ಮದುವೆಯಾಗಿದ್ದ ಗಂಗಮ್ಮ ಜೀವನ ನಡೆಸಲು ಬೆಂಗಳೂರಿಗೆ ಬಂದು ಗಾರೆ ಕೆಲಸಮಾಡುತ್ತಿದ್ದರು, ಅಂಬರೀಶ್ ಮತ್ತು ಗಂಗಮ್ಮ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದರು. ಇದೇ ವೇಳೆ ಗಂಗಮ್ಮಳ ಮೇಲೆ ಅಂಬರೀಶ್ ಸ್ನೇಹಿತನ ಕಣ್ಣು ಬಿದ್ದಿತ್ತು, ದಿನೇದಿನೆ ಮನೆಗೆ ಬರ್ತಿದ್ದ ಸ್ನೇಹಿತ ಗಡ್ಡಪ್ಪನಿಗೂ ಗಂಗಮ್ಮಳಿಗೂ ಸ್ನೇಹ ಬೆಳೆದು ಅನೈತಿಕ ಸಂಬಂಧಕ್ಕೆ ತಿರುಗಿತ್ತು.
ಎಲ್ಲಿ ತಮ್ಮ ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗ್ತಾನೋ ಅಂತಾ ಪ್ರಿಯಕರನೊಂದಿಗೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿ ಚಿತ್ರದುರ್ಗದ ಬಳಿ ಗಂಡನ ಶವವನ್ನ ಸುಟ್ಟು ಹಾಕಿ ಕಾಣೆಯಾಗಿರುವ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಪೊಲೀಸ್ ತನಿಖೆಯಲ್ಲಿ ಕೊಲೆ ಅಂತಾ ಸಾಬೀತಾಗಿ ಮೂರು ವರ್ಷ ಕಾಲ ಜೈಲು ಶಿಕ್ಷೆ ಅನುಭವಿಸುದ್ರು.
ಪ್ರಕರಣದಲ್ಲಿ ಜೈಲು ಸೇರಿದ ಗಂಗಮ್ಮ ಇತ್ತೀಚೆಗಷ್ಟೇ ಬೇಲ್ ಮೇಲೆ ಹೊರಬಂದು ಚಿಕ್ಕಬಿದರಕಲ್ಲು ಸಮೀಪದ ಅಂಚೆಪಾಳ್ಯ ಗ್ರಾಮದಲ್ಲಿ ಪ್ರಿಯಕರ ಗಡ್ಡಪ್ಪನ ಜೊತೆ ಸಂಸಾರ ಹೂಡಿದ್ದಳು. ಇತ್ತ ಅಣ್ಣನ ಸಾವಿಗೆ, ಅತ್ತಿಗೆಯ ಮೇಲಿನ ಪ್ರತೀಕಾರಕ್ಕಾಗಿ ತಮ್ಮರಾದ ಚನ್ನಪ್ಪ, ಆಲಪ್ಪ ಮತ್ತು ಮೃತ ಅಂಬರೀಶನ ತಂಗಿಯ ಗಂಡ ಮುದುಕಪ್ಪ ಕಾದು ಕುಳಿತಿದ್ರು,
ಬೇಲ್ ಮೇಲೆ ಬಂದ ಗಂಗಮ್ಮ ತನ್ನ ಮೊಬೈಲ್‌ನಿಂದ ಮೈದುನರಿಗೆ ಗಡ್ಡಪ್ಪನ ಜೊತೆ ಇರೋ ಖಾಸಗಿ ಫೋಟೊಗಳನ್ನ ಕಳಿಸುವ ಮೂಲಕ ಮತ್ತಷ್ಟು ಕೋಪ ಬರುವಂತೆ ಮಾಡಿದ್ದಳು. ಯಾವಾಗ ಅತ್ತಿಗೆಯ ಖಾಸಗಿ ಫೋಟೊವನ್ನ ಮೈದುನರು ನೋಡ್ತಾರೋ, ಕೆಂಡಾಮಂಡಲರಾದ್ರು. ಅಣ್ಣನ ಸಾವಿನ ಪ್ರತೀಕಾರವನ್ನ ತೀರಿಸಿಕೊಳ್ಳಲು ಪಣ ತೊಟ್ಟಿದ್ದ ತಮ್ಮಂದಿರು, ಮೂರು ದಿನಗಳ ಹಿಂದೆ ಬೆಂಗಳೂರಿಗೆ ಬಂದು ಗಡ್ಡಪ್ಪ ಹಾಗೂ ಗಂಗಮ್ಮನ ವಾಚ್ ಮಾಡಿ, ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಬರ್ತಿದ್ದ ವೇಳೆ ಇಬ್ಬರ ಮೇಲೆ ಅಟ್ಯಾಕ್ ಮಾಡಿ ಮಚ್ಚು ಬೀಸಿ ಮಾರಣಾಂತಿಕ ಹಲ್ಲೆ ನೆಡೆಸಿದ್ದಾರೆ.
ಗಂಗಮ್ಮ ಹಾಗೂ ಗಡ್ಡಪ್ಪ ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣ ಹೋರಾಟ ನೆಡೆಸುತ್ತಿದ್ದಾರೆ. ಇದೇ ವೇಳೆ ಹಲ್ಲೆ ಬಿಡಿಸಲು ಹೋದ ಸ್ಥಳೀಯ ಆಟೋ ಚಾಲಕ ಮಹದೇವಪ್ಪ ಎಂಬುವನ ಮೇಲೂ ಹಲ್ಲೆ ನಡೆದು ಗಂಭೀರ ಗಾಯಗೊಂಡ ಪರಿಣಾಮ ಸ್ಥಳೀಯ ಆಸ್ಪತ್ರೆಯಲ್ಲಿ ಆತನಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಕೃತ್ಯ ನಡೆಸಿದ ಮೂವರ ಪೈಕಿ ಚನ್ನಪ್ಪನನ್ನ ಬಂಧಿಸಿ ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದು, ತಲೆಮರೆಸಿಕೊಂಡ ಮತ್ತಿಬ್ಬರಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.