ಬೆಂಗಳೂರು: ನಾಳೆ ನಡೆಯುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಶಾಲೆಗಳನ್ನು ಮತಗಟ್ಟೆಗಳಾಗಿ ಮಾಡುತ್ತಿರುವ ಹೊತ್ತಿನಲ್ಲಿ ಆನೇಕಲ್‌ನ ಹೆಬ್ಬಗೋಡಿಯ ಸಿಂಗೇನ ಅಗ್ರಹಾರ ಎಬೆನೇಜರ್ ಇಂಟರ್ನ್ಯಾಷನಲ್ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಇಂದು ಬೆಳಗ್ಗೆ 07.05ಕ್ಕೆ ಶಾಲೆಗೆ ಬೆದರಿಕೆ ಮೇಲ್ ಬಂದಿದೆ. ಸ್ಪೋಟಕ ಡಿವೈಸ್ ಅನ್ನು ಶಾಲಾ ಕಟ್ಟದಲ್ಲಿ ಅಳವಡಿಸಲಾಗಿದೆ ಎಂದು ಬೆದರಿಕೆ ಹಾಕಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಆಗಮಿಸಿ ಇಡೀ ಶಾಲೆ ತುಂಬೆಲ್ಲ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ಪುರುಷೋತ್ತಮ್, ಡಿವೈಎಸ್ಪಿ ಲಕ್ಷ್ಮೀನಾರಾಯಣ ತಂಡ ಪರಿಶೀಲಿಸಿದ್ದಾರೆ. ಬಳಿಕ ಇದೊಂದು ಹುಸಿ ಬೆದರಿಕೆ ಕರೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷವೂ ಇದೇ ಶಾಲೆಗೆ ಹುಸಿ ಬೆದರಿಕೆ ಕರೆ ಬಂದಿತ್ತು. ಶಾಲೆಯ ದಾಖಲಾತಿ ಸಂದರ್ಭದಲ್ಲಿ ಹಲವರಿಗೆ ಅವಕಾಶ ಸಿಗಲಿಲ್ಲ ಎಂಬ ಆಕ್ರೋಶವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಬ್ಲಾಕ್ ವೆಬ್‌ನಿಂದಲೇ ಇಂತಹ ಬೆದರಿಕೆಗಳು ಬರುತ್ತಿವೆ ಎನ್ನಲಾಗಿದೆ. ಕಳೆದ ಬಾರಿಯೂ ಇಂತಹ ಪ್ರಕರಣ ದಾಖಲಾಗಿದ್ದು ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅದರ ಮೂಲವನ್ನು ಆಗಲೇ ಪತ್ತೆಹಚ್ಚಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಿರಲಿಲ್ಲ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ: ಮಹಿಳೆಯ ಬಂಧನ