ಬೆಂಗಳೂರು: ವಿಧಾನ ಪರಿಷತ್ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಅಭ್ಯರ್ಥಿಗಳ ಆಯ್ಕೆಗೆ ನಾಳೆ ಕೋರ್ ಕಮಿಟಿ ಸಭೆ ಕರೆಯಲಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಸಂಜೆ 4 ಗಂಟೆಗೆ ನಡೆಯುವ ಸಭೆಯಲ್ಲಿ ಯಾರ ಹೆಸರುಗಳನ್ನು ಶಿಫಾರಸು ಮಾಡಬೇಕು ಎಂದು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ನಂತರ ಪಕ್ಷದ ಕೇಂದ್ರ ಸಮಿತಿಗೆ ಕಳುಹಿಸಿಕೊಡಲಾಗುತ್ತದೆ ಎಂದರು. ತಮ್ಮ ಹೆಸರು ಕೇಳಿ ಬಂದಿತ್ತು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರಾನಾ, ನಾನೊಬ್ಬ ಕಾರ್ಯಕರ್ತ, ಪಕ್ಷ ವಹಿಸಿದ ಜವಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ವರ್ಚುವಲ್ ರ‍್ಯಾಲಿಗೆ ಪಕ್ಷದ ಕಚೇರಿಯಲ್ಲಿ ಸಿದ್ಧತೆ ನಡೆದಿದೆ. ಕಚೇರಿಯ ಮೂರನೇ ಫ್ಲೋರ್ನಲ್ಲಿ ವರ್ಚುವಲ್ ಸಂವಾದ ನಡೆಯಲಿದೆ. ಎರಡು ಎಲ್ಇಡಿ ಸ್ಕ್ರೀನ್ಗಳ ಅಳವಡಿಕೆ, ನಾಯಕರು ಕೂರಲು ಸಾಮಾಜಿಕ ಅಂತರದೊಂದಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸುರಾನಾ ತಿಳಿಸಿದರು.
ಸಂವಾದದಲ್ಲಿ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ ಭಾಗಿಯಾಗಲಿದ್ದಾರೆ. ರಾಜ್ಯದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗವಹಿಸಲಿದ್ದಾರೆ. ಮೋದಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆ ಈ ಸಭೆ ಆಯೋಜನೆ ಮಾಡಿದ್ದು, ಕೊರೊನಾ ಕುರಿತು ಜನಜಾಗ್ರತೆ, ಸ್ವದೇಶಿ ವಸ್ತು ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರ‍್ಯಾಲಿ ನಡೆಸಲಾಗುತ್ತಿದೆ. ಮುಂದಿನ ಆರೇಳು ತಿಂಗಳು ಬಹಿರಂಗ ರ‍್ಯಾಲಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರು ತಿಳಿಸಿದರು.
ಇಂದಿನ ಕಾರ್ಯಕ್ರಮವನ್ನು ಒಂದು ಕೋಟಿ ಜನ ವೀಕ್ಷಣೆ ಮಾಡುವ ನಿರೀಕ್ಷೆ ಇದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ಆಯೋಜನೆ ಮಾಡಿದ್ದು, ಬಿಜೆಪಿ ಕಚೇರಿಯಲ್ಲಿ ಸುಮಾರು 40 ಜನ ಸಾಮಾಜಿಕ ಅಂತರ ಕಾಯ್ದುಕೊಂಡು ಭಾಗಿಯಾಗಲಿದ್ದಾರೆ ಎಂದು ಸುರಾನಾ ಮಾಹಿತಿ ನೀಡಿದರು.