ಬೆಂಗಳೂರು: ನನ್ನ ತೇಜೋವಧೆ ಮಾಡಲು ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಇಂಥ ಪುಸ್ತಕಗಳನ್ನು ಹೊರತರುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಶಿವಾನಂದ ವೃತ್ತ ಸಮೀಪದ ಸರ್ಕಾರಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಟಿಪ್ಪು ಹಾಗೂ ನನ್ನ ಬಗೆಗಿನ ಪುಸ್ತಕ ಬಿಡುಗಡೆ ವಿಚಾರ ನನಗೆ ತಿಳಿದಿಲ್ಲ. ಕಾಮಾಲೆ ರೋಗದವರಿಗೆ ಎಲ್ಲವೂ ಹಳದಿಯಾಗಿ ಕಾಣಿಸುತ್ತದೆ. ಟಿಪ್ಪು ಥರ ಖಡ್ಗ ಹಿಡಿದು ಡ್ರೆಸ್ ಹಾಕಿಕೊಂಡವರು ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ. ಟಿಪ್ಪು ಬಗೆಗಿನ ಶೇಖ್ ಅಲಿ ಪುಸ್ತಕ ಬರೆದಾಗ ಮುನ್ನುಡಿ ಬರೆದವರು ಯಾರು? ಇದು ಇಬ್ಬಂದಿತನ ಅಲ್ವಾ? ಎಂದು ಕೇಳಿದರು.
ಚುನಾವಣೆ ಸಮೀಸುತ್ತಿರುವಾಗ ಇಂಥ ಪುಸ್ತಕ ಹೊರತರುತ್ತಿರುವುದು ಮಾನನಷ್ಟದ ಉದ್ದೇಶ ಹೊಂದಿದೆ. ಕಾನೂನು ಪ್ರಕಾರ ಏನು ಮಾಡೋಕೆ ಆಗುತ್ತೆ ನೋಡೋಣ ಎಂದರು. ಇಂದಿನ ಕೋಲಾರ ಪ್ರವಾಸ ಕುರಿತು ಚುಟುಕಾಗಿ ಉತ್ತರಿಸಿದ ಸಿದ್ದರಾಮಯ್ಯ, ಹೌದು, ಕೋಲಾರಕ್ಕೆ ಹೋಗುತ್ತಿದ್ದೇನೆ ಎಂದರು.
ಬಿಜೆಪಿ ಪುಸ್ತಕಕ್ಕೆ ಸಿದ್ದರಾಮಯ್ಯ ಕೌಂಟರ್: ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಗೂ ಮುನ್ನ ಸಿದ್ದರಾಮಯ್ಯ ಸರಣಿ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ಸರ್ಕಾರದ ಅವಧಿಯ ಸಾಧನೆಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. ಇದರಲ್ಲಿ ತಮ್ಮ ಸರ್ಕಾರದ ಸಾಧನೆಯನ್ನು ರಾಜ್ಯ ಬಿಜೆಪಿ ಪೋಸ್ಟರ್ ಮೂಲಕ ಬಿಡುಗಡೆ ಮಾಡಿದಂತೆ ಚಿತ್ರಿಸಲಾಗಿದೆ.
ಇಂದು ಸಂಜೆ ಕೃತಿ ಬಿಡುಗಡೆ: ಇಂದು ಸಂಜೆ ಟೌನ್ಹಾಲ್ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಈ ಪುಸ್ತಕದಲ್ಲಿ ಸಿದ್ದರಾಮಯ್ಯ ಫೋಟೋವನ್ನು ಟಿಪ್ಪು ಮಾದರಿಯಲ್ಲಿ ಹಾಕಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಆಯೋಜಕರ ವಿರುದ್ಧ ದೂರು ನೀಡಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿರುವ ತಿರುಗೇಟಿನಲ್ಲಿ ಅವರ ಸರ್ಕಾರದ ಸಾಧನೆ ಪ್ರದರ್ಶಿಸಲಾಗಿದೆ. ಇದರಲ್ಲಿ ಕೆಲವು ಇಂತಿವೆ:
ಮುಖಂಡರ ಭೇಟಿ: ಸಿದ್ದರಾಮಯ್ಯ ಅವರಿಂದು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಮಾಜಿ ಸಚಿವ ಎಂ.ಆರ್.ಸೀತಾರಾಂ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕ ನಾರಾಯಣ ಸ್ವಾಮಿ, ಕೋಲಾರ ವಿಧಾನಸಭೆ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು ಹಾಗು ಉದಯಶಂಕರ್ ಮತ್ತಿತರು ಹಾಜರಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯರಿಂದ ಇಂದು ಅಂತಿಮ ನಿರ್ಧಾರ? ಕೋಲಾರದ ಕೈ ಸಮಾವೇಶದತ್ತ ಎಲ್ಲರ ಕಣ್ಣು!