ಬೆಂಗಳೂರು: ರಾಜ್ಯ ಬಿಜೆಪಿ ನೂತನ ಪದಾಧಿಕಾರಿಗಳ ಮೊದಲ ಸಭೆಯಲ್ಲೇ ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ, ನಿನ್ನೆ 40 ಸಾವಿರ ಕೋಟಿ ರೂ ಮೊತ್ತದ ಕೋವಿಡ್ ಅಕ್ರಮ ಬಗ್ಗೆ ಆರೋಪ ಮಾಡಿದ್ದ ಯತ್ನಾಳ್ ಬಗ್ಗೆ ಮಾತುಕತೆ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಹಿರಂಗ ಹೇಳಿಕೆ ಕೊಡದಂತೆ ಸೂಚನೆ: ಬಿ.ಎಸ್.ಯಡಿಯೂರಪ್ಪ ವಿರುದ್ಧ ಯತ್ನಾಳ್ ನೀಡಿರುವ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗುವ ಬಗ್ಗೆ ಕೆಲ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಯತ್ನಾಳ್ ಹೇಳಿಕೆ ಬಗ್ಗೆ ಭಾಷಣದಲ್ಲೂ ವಿಜಯೇಂದ್ರ ಪ್ರಸ್ತಾಪಿಸಿದ್ದಾರೆ. ಪಕ್ಷಕ್ಕೆ ಮುಜುಗರ ತರುವಂತೆ ಬಹಿರಂಗ ಹೇಳಿಕೆಗಳನ್ನು ಕೊಡದಂತೆ ಪದಾಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಯತ್ನಾಳ್ ಹೇಳಿಕೆ ಬಗ್ಗೆ ಹೈಕಮಾಂಡ್ ನೋಡಿಕೊಳ್ಳಲಿದೆ ಎಂದಿದ್ದಾರೆ.
ಯತ್ನಾಳ್ ವಿರುದ್ಧ ಕ್ರಮಕ್ಕೆ ನೂತನ ಪದಾಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ. ಅವರ ಹೇಳಿಕೆ ಮೇಲೆ ಕಾಂಗ್ರೆಸ್ನವರು ನಮ್ಮ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ವಿಜಯಪುರದಲ್ಲಿ ಅವರೊಬ್ಬರು ಮಾತ್ರ ಗೆದ್ದಿದ್ದಾರೆ. ಉಳಿದ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಸೋಲಾಗಿದೆ. ಇದಕ್ಕೆ ಕಾರಣ ಯತ್ನಾಳ್ ಅವರ ಅಡ್ಜಸ್ಟ್‌ಮೆಂಟ್ ರಾಜಕಾರಣ. ಪಕ್ಷ ಕಟ್ಟಿದವರ ವಿರುದ್ಧ ಹರಿಹಾಯ್ತಿರುವುದು ಸರಿಯಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಹೈಕಮಾಂಡ್ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳುವುದು ಸೂಕ್ತ ಎಂದು ಹಲವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ತಯಾರಿ ಕುರಿತು ಚರ್ಚೆ: ಪ್ರಮುಖವಾಗಿ, ಪಕ್ಷ ಸಂಘಟನೆ ಮತ್ತು ಲೋಕಸಭಾ ಚುನಾವಣೆ ತಯಾರಿ ಕುರಿತು ಸಭೆಯಲ್ಲಿ ಹೆಚ್ಚಿನ ಚರ್ಚೆಗಳು ನಡೆದಿವೆ. ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಂಕಾಗಿರುವ ಕಾರ್ಯಕರ್ತರಲ್ಲಿ ಚೈತನ್ಯ ತುಂಬಿ ಪಕ್ಷವನ್ನು ತಳಮಟ್ಟದಿಂದ ಬಲವರ್ಧನೆ ಮಾಡಲು ಏನೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪಕ್ಷದ ಮುಂದಿನ ಹೆಜ್ಜೆಗಳು ಏನಿರಬೇಕು ಎಂಬ ಬಗ್ಗೆಯೂ ಚರ್ಚೆಗಳಾಗಿದೆ.
ವಿಧಾನಸಭಾ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲಲು ಏನೆಲ್ಲ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂಬ ಕುರಿತು ಸಭೆಯಲ್ಲಿ ಚರ್ಚೆಗಳು ನಡೆದಿವೆ. ಇದರ ಜೊತೆಗೆ ಮುಂದಿನ ಬಿಬಿಎಂಪಿ ಜಿಲ್ಲಾ ತಾಲೂಕು ಪಂಚಾಯಿತಿ ಚುನಾವಣೆಗಳ ಗೆಲುವಿನ ಬಗ್ಗೆಯೂ ಮಾತುಕತೆ ನಡೆದಿವೆ ಎಂದು ಮೂಲಗಳು ಹೇಳಿವೆ.
ವಿಕಸಿತ ಭಾರತ ಕಾರ್ಯಕ್ರಮ: ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ವಿಕಸಿತ ಭಾರತ ಕಾರ್ಯಕ್ರಮವನ್ನು ರಾಜ್ಯದೆಲ್ಲೆಡೆ ಯಶಸ್ವಿಗೊಳಿಸುವ ಬಗ್ಗೆಯೂ ಪದಾಧಿಕಾರಿಗಳ ಸಭೆಯಲ್ಲಿ ಚರ್ಚೆಯಾಗಿದೆ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ವಿಕಸಿತ ಭಾರತ ಕಾರ್ಯಕ್ರಮವನ್ನು ಹಮ್ಮಿಕೊಂಡು ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಸೇರಿ 28 ಸ್ಥಾನಗಳನ್ನು ಗೆಲ್ಲುವ ಬಗ್ಗೆ, ಎಲ್ಲ ಲೋಕಸಭಾ ಕ್ಷೇತ್ರಗಳು, ಜಿಲ್ಲೆಗಳಲ್ಲಿ ಬೃಹತ್ ಸಮಾವೇಶ, ಕಾರ್ಯಕರ್ತರ ಸಭೆಗಳನ್ನು ನಡೆಸುವ ಬಗ್ಗೆ ಚರ್ಚೆ ನಡೆದಿದೆ. ಬರುವ ಜನವರಿಯಿಂದ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಪಕ್ಷದ ಸಮಾವೇಶಗಳನ್ನು ನಡೆಸುವ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್, ಉಪಾಧ್ಯಕ್ಷ ಮುರುಗೇಶ್ ನಿರಾಣಿ, ನೂತನ ಪ್ರಧಾನ ಕಾರ್ಯದರ್ಶಿ ಸುನಿಲ್‌ಕುಮಾರ್, ಪ್ರೀತಂಗೌಡ, ಪಿ.ರಾಜೀವ್, ನಂದೀಶ್‌ರೆಡ್ಡಿ, ಎಂ.ರಾಜೇಂದ್ರ ಸೇರಿದಂತೆ ಎಲ್ಲ ನೂತನ ಉಪಾಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
60 ಸದಸ್ಯರ ತಂಡದಿಂದ ರಾಜ್ಯ ಪ್ರವಾಸ: ಸಭೆಯ ನಂತರ ಮಾಧ್ಯಮಗಳೊಂದಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಮಾತನಾಡಿ, ರಾಜ್ಯಾಧ್ಯಕ್ಷರು ಪದಾಧಿಕಾರಿಗಳ ನಿಯುಕ್ತಿ ಬಳಿಕ ಮೊದಲ ಸಭೆ ನಡೆಸಿದರು. ಬಹಳಷ್ಟು ಗಂಭೀರ ವಿಚಾರಗಳು ಚರ್ಚೆಯಾಗಿವೆ. 2024ರ ಲೋಕಸಭಾ ಚುನಾವಣೆ ವರೆಗೆ ಯಾವೊಬ್ಬ ಪದಾಧಿಕಾರಿಗಳು ವಿಶ್ರಮಿಸುವಂತಿಲ್ಲ. ಚುನಾವಣೆ ಗೆಲ್ಲಿಸುವವರೆಗೂ ಮನೆಗೆ ಹೋಗುವಂತಿಲ್ಲ ಎಂದು ಹೇಳಿದರು.
ಪದಾಧಿಕಾರಿಗಳು ಹಿರಿಯರನ್ನು, ಬೂತ್ ಕಾರ್ಯಕರ್ತರು, ವರಿಷ್ಠರನ್ನು ಸಮಾನವಾಗಿ ನೋಡಿಕೊಳ್ಳಬೇಕು. ಎಲ್ಲರನ್ನೂ ವಿಶ್ವಾಸದಿಂದ ನೋಡಬೇಕು. ವಿಕಸಿತ ಭಾರತ ಸಂಕಲ್ಪ ಯಾತ್ರೆ, ನಮೋ ಆಪ್ ಮೂಲಕ ನಿಗದಿತ ಟಾಸ್ಕ್ ನೀಡಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲು ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಫಲಾನುಭವಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಚರ್ಚೆ ಮಾಡಬೇಕು. ಇದು ಎಲ್ಲಾ ಪದಾಧಿಕಾರಿಗಳಲ್ಲಿ ಉತ್ಸಾಹ ಮೂಡಿಸಿದೆ. ಮುಂದಿನ ಲೋಕಸಭಾ ಚುನಾವಣೆಗೆ ಪದಾಧಿಕಾರಿಗಳನ್ನ ಒಟ್ಟಿಗೆ ಕರೆದುಕೊಂಡು ಹೋಗಬೇಕು ಎಂದರು.
ಜಿಲ್ಲಾ ಪದಾಧಿಕಾರಿಗಳ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ 60 ಬಿಜೆಪಿ ಸದಸ್ಯರ ತಂಡವೂ ಏಕಕಾಲದಲ್ಲಿ ಪ್ರವಾಸ ಕೈಗೊಳ್ಳಲಿದೆ. ಹಿರಿಯ ನಾಯಕರು ಪ್ರವಾಸದಲ್ಲಿ ಭಾಗವಹಿಸಿ,ಎಲ್ಲರ ಅಭಿಪ್ರಾಯ ಪಡೆಯಲಿದ್ದಾರೆ ಎಂದು ಹೇಳಿದರು. ಯತ್ನಾಳ್ ವಿಚಾರದ ಕುರಿತು ಪಕ್ಷದ ಇತ್ತೀಚಿನ ಎಲ್ಲಾ ಬೆಳವಣಿಗೆ ಬಗ್ಗೆ ಚರ್ಚೆಯಾಗಿದೆ. ಸಭೆಯಲ್ಲಿ ಆದ ಚರ್ಚೆ ಬಹಿರಂಗಪಡಿಸಲ್ಲ. ಪಕ್ಷದ ಘನತೆಗೆ ಚ್ಯುತಿ ಬರುವ ಯಾವ ವಿಚಾರ ಬಹಿರಂಗ ಮಾಡಲ್ಲ. ಹೈಕಮಾಂಡ್ ಸೂಕ್ತ ನಿರ್ಧಾರವನ್ನು, ಸೂಕ್ತ ಸಂದರ್ಭದಲ್ಲಿ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
ಇದನ್ನೂಓದಿ: ಕಾಂತರಾಜು ವರದಿ ಜಾರಿಗೆ ಒತ್ತಾಯ; ಜ.28ಕ್ಕೆ ಬೃಹತ್ ಅಹಿಂದ ಸಮಾವೇಶ, ಸಿಎಂಗೆ ಆಹ್ವಾನ