ಬೆಂಗಳೂರು: ಆರ್.ಆರ್ ನಗರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ನಡೆಸುತ್ತಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಂದಾಯ ಸಚಿವ ಆರ್.ಅಶೋಕ್, ಕೃಷಿ ಸಚಿವ ಬಿ.ಸಿ ಪಾಟೀಲ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಭಾಗಿಯಾಗಿದ್ದಾರೆ. ಯಶವಂತಪುರ ರೈಲ್ವೆ ನಿಲ್ದಾಣದಿಂದ ಜೆ.ಪಿ.ಪಾರ್ಕ್ವರೆಗೂ ಅಬ್ಬರದ ಪ್ರಚಾರ ನಡೆಸಲಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಮತಯಾಚಿಸುತ್ತಿದ್ದಾರೆ.
ರೋಡ್ ಶೋ ಸಾಗಿದ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ಮನೆಗಳ ಮಹಡಿ ಮೇಲಿಂದ ದರ್ಶನ್ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹೂ ಮಳೆಯನ್ನು ಸುರಿಸಿದರು.
ಕೊರೊನಾ ನಿಯಮ ಉಲ್ಲಂಘನೆ:
ಇಂದಿನ ದರ್ಶನ್ ಪ್ರಚಾರ ಕಾರ್ಯಕ್ರಮದಲ್ಲಿಯೂ ಕೊರೊನಾ ನಿಯಮ ಉಲ್ಲಂಘನೆ ಮಾಡಲಾಯಿತು. ತೆರೆದ ವಾಹನದಲ್ಲಿ ಅಂತರವಿಲ್ಲದೆ ಮುಖಂಡರು ಅಕ್ಕಪಕ್ಕದಲ್ಲಿ ನಿಂತು ಜನರತ್ತ ಕೈ ಬೀಸುತ್ತಿದ್ದರು. ಮಾಸ್ಕ್ ಧರಿಸಿದ್ದರೂ ಅಂತರ ಪಾಲನೆ ಮಾಡಲಿಲ್ಲ. ಮೆರವಣಿಗೆಯುದ್ದಕ್ಕೂ ನೂರಾರು ಬಿಜೆಪಿ ಕಾರ್ಯಕರ್ತರು, ಮುನಿರತ್ನ ಅಭಿಮಾನಿಗಳು ಭಾಗಿಯಾಗಿದ್ದು, ಸಾಮಾಜಿಕ ಅಂತರ ಮರೆತು ಗುಂಪುಗೂಡಿ ಸಾಗಿದರು. ಬಹುತೇಕರು ಮಾಸ್ಕ್ ಸರಿಯಾಗಿ ಧರಿಸದೇ ಇದ್ದದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.