ಬೆಂಗಳೂರು: ಹುಟ್ಟಿದ ಮಗುವನ್ನು ನೋಡಿ ಆಸ್ಪತ್ರೆಯಿಂದ ವಾಪಸಾಗುತ್ತಿದ್ದ ವ್ಯಕ್ತಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದು, ಆಸ್ಪತ್ರೆ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ನಗರದ 129 ವಾರ್ಡ್ನ ಜ್ಞಾನಭಾರತಿಯ ದೀಪಾ ಕಾಂಪ್ಲೆಕ್ಸ್ ಬಳಿಯ 54 ವರ್ಷದ ನಿವಾಸಿ ಪಿ-1364 ಸೋಂಕಿನಿಂದ ಮೃತಪಟ್ಟಿದ್ದಾರೆ. ಈತ ನಿನ್ನೆ (ಸೋಮವಾರ) ಸಂಜೆ ಬಿಜಿಎಸ್ ಆಸ್ಪತ್ರೆಗೆ ಸಂಬಂಧಿಕರ ಮಗುವನ್ನು ನೋಡಿಕೊಂಡು ಹಿಂತಿರುಗುತ್ತಿದ್ದ ವೇಳೆ ಆಸ್ಪತ್ರೆ ಮೆಟ್ಟಿಲ ಮೇಲೆ ಕುಸಿದು ಬಿದ್ದಿದ್ದರು. ಕೂಡಲೇ ಆಸ್ಪತ್ರೆ ಸಿಬ್ಬಂದಿ ಇಸಿಜಿ ಪರೀಕ್ಷೆಗೆ ಒಳಪಡಿಸಿದರು.
ಈ ವೇಳೆ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ತಿಳಿಯಲಾಗಿತ್ತು. ಆದರೆ, ವಯಸ್ಸಾದ ಹಿನ್ನೆಲೆಯಲ್ಲಿ ಅವರ ಗಂಟಲು ದ್ರವ ಪರೀಕ್ಷೆಯನ್ನು ಮಾಡಿದಾಗ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಹೀಗಾಗಿ, ಕೂಡಲೇ ಅವರ ಮನೆಯಲ್ಲಿದ್ದ ಆರು ಮಂದಿ ಪ್ರಥಮ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದ್ದು, ದೀಪಾ ಕಾಂಪ್ಲೆಕ್ಸ್ ಬಳಿಯ ನೂರು ಮೀಟರ್ ಸುತ್ತಲಿನ ಜಾಗವನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಿಸಲಾಗಿದೆ.
ಮೃತ ವ್ಯಕ್ತಿ ಒಂದು ವಾರದ ಹಿಂದೆ ಶಾಮನೂರು ಶಿವಶಂಕರಪ್ಪ ಆಸ್ಪತ್ರೆಗೆ ತೆರಳಿ ಸುಸ್ತಾಗುತ್ತಿದೆ ಎಂಬ ಕಾರಣಕ್ಕೆ ಚಿಕಿತ್ಸೆ ಪಡೆದಿದ್ದರು. ಬಿಜಿಎಸ್ ಆಸ್ಪತ್ರೆಯಲ್ಲಿ ಕುಸಿದು ಬಿದ್ದಾಗ ಚಿಕಿತ್ಸೆ ನೀಡಿದ ನರ್ಸ್, ವೈದ್ಯರನ್ನು ಪತ್ತೆಹಚ್ಚಿ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಬೆಂಗಳೂರು ಜಿಲ್ಲಾ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದರು.