ಬೆಂಗಳೂರು: ಇಲ್ಲಿನ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಆರ್ಸಿಎಲ್ ಕ್ರಮ ಕೈಗೊಂಡಿದೆ. ಪ್ರಭಾವಿ ಉಪ ಮುಖ್ಯ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಸೈಟ್ ಇಂಜಿನಿಯರ್ ಅಮಾನತು ಮಾಡಲಾಗಿದೆ. ಅಷ್ಟೇ ಅಲ್ಲ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಶನ್ ಲಿಮಿಟೆಡ್ (BMRCL) ಈ ವಿಷಯವನ್ನು ಸ್ವತಂತ್ರವಾಗಿ ತನಿಖೆ ಮಾಡಲು ಮತ್ತು ವರದಿ ನೀಡಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ಗೆ (IISc) ಗೆ ವಿನಂತಿಸಿದೆ.
ಸಿಎಂ ಆದೇಶ: ಪಿಲ್ಲರ್ ಕುಸಿತ ದುರಂತದ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಿನ್ನೆ ಮಂಗಳವಾರ ರಾತ್ರಿ ನಮ್ಮ ಮೆಟ್ರೋದ ಆಡಳಿತ ಮಂಡಳಿಯ ಉನ್ನತ ಅಧಿಕಾರಿಗಳ ಸಭೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಆದೇಶ ನೀಡಿದ್ದರು. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಯಾರು ತಪ್ಪಿತಸ್ಥರು ಎಂದು ಪರಿಶೀಲನೆ ನಡೆಸಿದ ಮೆಟ್ರೋ ನಿಗಮದ ಆಡಳಿತ ಮಂಡಳಿಯು 3 ಜನ ಇಂಜಿನಿಯರ್ಗಳನ್ನು ಸೇವೆಯಿಂದ ಅಮಾನತುಗೊಳಿಸಿ ಶಿಸ್ತು ಕ್ರಮ ಜರುಗಿಸಿದೆ.
ಎಂಟು ಜನರ ಮೇಲೆ ಎಫ್ಐಆರ್: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತದಿಂದ ಮಂಗಳವಾರ ತಾಯಿ ಮತ್ತು ಮಗು ಮೃತಪಟ್ಟಿದ್ದು, ಈ ಪ್ರಕರಣ ಸಂಬಂಧ 8 ಜನರ ಮೇಲೆ ಎಫ್ಐಆರ್ ದಾಖಲಾಗಿತ್ತು. ನಾಗಾರ್ಜುನ ಕನ್ಸ್‌ಟ್ರಕ್ಷನ್ ಕಂಪನಿಯ ಪೂಜಾ ಜೆಇ, ಚೈತನ್ಯ, ಮೆಥಾಯಿ ಕಂಪನಿಯ ವಿಕಾಸ್ ಸಿಂಗ್ ಪಿಎಂ, ಸೂಪರ್ ವೈಸರ್ ಲಕ್ಷ್ಮಿ ಪತಿ, ಬಿಎಂಆರ್ಸಿಎಲ್ ಇಂಜಿನಿಯರ್ ವೆಂಕಟೇಶ್ ಶೆಟ್ಟಿ, ಬಿಎಂಆರ್ಸಿಎಲ್ ಇಂಜಿನಿಯರ್ ಮಹೇಶ್ ಬೆಂಡೆಕೇರಿ ಇವರ ಮೇಲೆ ದೂರು ದಾಖಲಾಗಿದೆ.
ತಾಯಿ ಮಗುವಿನ ಅಂತ್ಯಕ್ರಿಯೆ: ನಿನ್ನೆ ನಡೆದ ದುರಂತದಲ್ಲಿ ಮೃತರಾದ ತೇಜಸ್ವಿನಿ ಅವರ ಮೃತದೇಹದ ಅಂತ್ಯಕ್ರಿಯೆಯನ್ನು ದಾವಣಗೆರೆಯ ವೈಕುಂಠ ಏಕಧಾಮದಲ್ಲಿ ನಡೆಸಲಾಯಿತು. ಮಗು ವಿಹಾನ್ ಶಾಮನೂರು ರಸ್ತೆಯಲ್ಲಿನ ಬಾಟಲ್ ಬಿಲ್ಡಿಂಗ್ ಹಿಂಭಾಗದ ರುದ್ರಭೂಮಿಯಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ವಿಧಿವಿಧಾನದಂತೆ ಅಂತ್ಯಕ್ರಿಯೆ ಮಾಡಲಾಯಿತು. ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ: ಮೆಟ್ರೋ ಪಿಲ್ಲರ್ ದುರಂತ: ದಾವಣಗೆರೆಯಲ್ಲಿ ನೆರವೇರಿದ ತಾಯಿ, ಮಗುವಿನ ಅಂತ್ಯಕ್ರಿಯೆ
ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ಬೆಂಗಳೂರು ನಮ್ಮ ಮೆಟ್ರೋ ರೈಲು ಯೋಜನೆಯ ನಿರ್ಮಾಣ ಹಂತದ ಕಬ್ಬಿಣದ ಪಿಲ್ಲರ್ ಕುಸಿದು ಬೈಕ್ನಲ್ಲಿ ಮಕ್ಕಳನ್ನು ಶಿಶು ವಿಹಾರಕ್ಕೆ ಬಿಡಲು ತೆರಳುತ್ತಿದ್ದವರ ಮೇಲೆ ಬಿದ್ದಿತ್ತು. ಈ ಘಟನೆ ನಿನ್ನೆ (ಮಂಗಳವಾರ) ಬೆಳಗ್ಗೆ 10:30 ಸುಮಾರಿಗೆ ಸಂಭವಿಸಿತ್ತು. ಈ ಘಟನೆಯಲ್ಲಿ ತಾಯಿ - ಮಗು ಸಾವನ್ನಪ್ಪಿದ್ದರು. ತಂದೆ ಮಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಹೊರಮಾವು ಡಿಮ್ಯಾಕ್ಸ್ ಅಪಾರ್ಟ್ ಮೆಂಟ್ ನಿವಾಸಿಯಾದ ಗದಗ ಮೂಲದ ತೇಜಸ್ವಿನಿ (28) ಮತ್ತು ವಿಹಾನ್(2.5) ಘಟನೆಯಲ್ಲಿ ಮೃತ ಪಟ್ಟ ದುರ್ದೈವಿಗಳಾಗಿದ್ದಾರೆ. ಗದಗ ಮೂಲದ ಲೋಹಿತ್ ಸಿವಿಲ್ ಇಂಜಿನಿಯರ್ ಆಗಿ ಬೆಂಗಳೂರಿನನಲ್ಲಿ ಕೆಲಸ ಮಾಡುತ್ತಿದ್ದರು. ತೇಜಸ್ವಿನಿ ಮತ್ತು ಲೋಹಿತ್ ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕನಲ್ಲಿ ಉದ್ಯೂಗಿಗಳಾಗಿದ್ದರು. ಇದರಿಂದಾಗಿ ಮಕ್ಕಳನ್ನು ಶಿಶು ವಿಹಾರಕ್ಕೆ ಬಿಡಲು ಹೋಗುತ್ತಿದ್ದಾಗ ಘಟನೆ ಸಂಭವಿಸಿತ್ತು.
ಇದನ್ನೂ ಓದಿ: ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ.. ಎಂಟು ಮಂದಿ ವಿರುದ್ಧ ಎಫ್ಐಆರ್ ದಾಖಲು