ಬೆಂಗಳೂರು : ಕೊರೊನಾ ಭೀತಿ ಹಿನ್ನೆಲೆಯಲ್ಲಿ ವಿದೇಶದಿಂದ ಬರುವವರನ್ನು ತಪಾಸಣೆ ನಡೆಸಿ 14 ದಿನಗಳ ಕಾಲ ಮನೆಯಲ್ಲಿರುವಂತೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಪೊಲೀಸ್ ಅಧಿಕಾರಿಗಳು,ಸಿಬ್ಬಂದಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಮನೆಗಳಿಗೆ ತರಳಿ ತಪಾಸಣೆ ನಡೆಸಲಿದ್ದಾರೆ.
ವಿದೇಶದಿಂದ ನಗರಕ್ಕೆ ಮರಳಿರುವ ಬೆಂಗಳೂರು ಕೇಂದ್ರ ವಿಭಾಗದ 872 ಶಂಕಿತರ ಮನೆಗಳಿಗೆ ಟ್ಯಾಕ್ಸ್ ಇನ್ಸ್ಪೆಕ್ಟರ್, ರೆವಿನ್ಯೂ ಇನ್ಸ್ಪೆಕ್ಟರ್, ಪೊಲೀಸ್ ಸಿಬ್ಬಂದಿ ಸೇರಿ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಈಗಾಗಲೇ ಪೊಲೀಸ್ ಅಧಿಕಾರಿಗಳು ಒಟ್ಟು 870 ಕುಟುಂಬಗಳ ಪಟ್ಟಿ ಕೊಟ್ಟಿದ್ದಾರೆ. ಅವರ ಮನೆಗಳಿಗೆ ತೆರಳಿ ಮಾಹಿತಿಯನ್ನು ಕಲೆ ಹಾಕುತ್ತಾರೆ. ಇದರ ಜೊತೆಗೆ ಯಾವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂಬುದನ್ನು ಸೂಚಿಸಲಾಗುತ್ತದೆ. 42 ತಂಡಗಳಾಗಿ ಪ್ರತಿಯೊಬ್ಬರ ಇರುವಿಕೆಯನ್ನೂ ತಂಡ ಪತ್ತೆ ಹಚ್ಚಲಿವೆ.
ಪತ್ತೆ ಕಾರ್ಯಕ್ಕೆ ಖಾಸಗಿ ವಾಹನ ಬಳಕೆ ಮಾಡಿ ಸೋಂಕಿತರು ಮನೆಯಲ್ಲಿಯೇ ಇದ್ದಾರೆಯೇ, ಹೊರಗಡೆ ಸುತ್ತಾಡುತ್ತಿದ್ದಾರೆಯೇ,ಅಕ್ಕಪಕ್ಕದ ನಿವಾಸಿಗಳಿಂದ ಅವರ ಮಾಹಿತಿ ಕಲೆ ಹಾಕಿ ಅವರ ಮೇಲೆ ನಿಗಾ ವಹಿಸುವಂತೆ ಸೂಚನೆ ಕೂಡ ನೀಡಲಿದ್ದಾರೆ.