ಬೆಂಗಳೂರು: ಸರ್ಕಾರ 3ನೇ ಹಂತದ ಅನ್ಲಾಕ್ ಘೋಷಿಸಿದೆ. ದೇವಸ್ಥಾನ, ಜಿಮ್ ಹಾಗು ಮಾಲ್ಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಆದರೆ ನಗರದಲ್ಲಿರುವ ಇಸ್ಕಾನ್ ದೇವಸ್ಥಾನ ಇನ್ನೂ ಒಂದು ವಾರದ ಬಳಿಕವಷ್ಟೇ ಬಾಗಿಲು ತೆರೆಯಲಿದೆ.
ಕಳೆದೆರಡು ತಿಂಗಳಿಂದ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ಡೌನ್ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಬಳಿಕ ಕೋವಿಡ್ ಕೇಸ್ಗಳ ಪಾಸಿಟಿವಿಟಿ ರೇಟ್ ಕಡಿಮೆಯಾದ ಹಾಗೆಯೇ ಸರ್ಕಾರ ರಾಜ್ಯವನ್ನು ಹಂತ ಹಂತವಾಗಿ ಅನ್ಲಾಕ್ ಮಾಡಲು ಮುಂದಾಗಿತ್ತು. ಅದರಂತೆ ಮುಖ್ಯಮಂತ್ರಿಗಳು ನಿನ್ನೆ ಸುದ್ದಿಗೋಷ್ಠಿ ನಡೆಸಿ ಮೂರನೇ ಹಂತದ ಅನ್ಲಾಕ್ ಘೋಷಣೆ ಮಾಡಿ ದೇವಸ್ಥಾನ, ಜಿಮ್, ಮಾಲ್, ಕ್ರೀಡಾಭ್ಯಾಸ ಕೇಂದ್ರಗಳು, ಈಜುಕೊಳ ಸಂಕೀರ್ಣಗಳನ್ನು ತೆರೆಯಲು ಅವಕಾಶ ಕಲ್ಪಿಸಿರುವ ಬಗ್ಗೆ ತಿಳಿಸಿದರು.