ಬೆಂಗಳೂರು: ನಾಳೆಯಿಂದ 3 ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಕಲರವ ಇರಲಿದೆ. ಈ ವೇಳೆ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಫೆ. 3ರಿಂದ 5ರವರೆಗೆ ಏರ್ ಶೋ ನಡೆಯಲಿದೆ. ದೇಶ-ವಿದೇಶಗಳಿಂದ ಗಣ್ಯರು ರಾಜಧಾನಿಗೆ ದೌಡಾಯಿಸಿದ್ದಾರೆ. ಪ್ರತಿಷ್ಠಿತ ತಾರಾ ಹೋಟೆಲ್ಗಳಲ್ಲಿ ವಾಸ್ತವ್ಯ ಹೂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿಯೂ ಪೊಲೀಸರು ಭದ್ರತೆಗೆ ಕ್ರಮ ಕೈಗೊಂಡಿದ್ದಾರೆ.
ಯಲಹಂಕ ವಾಯುನೆಲೆಯಲ್ಲಿ ನಡೆಯುವ ವೈಮಾನಿಕ ಪ್ರದರ್ಶನಕ್ಕೆ 3 ಸುತ್ತಿನ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. 4 ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. 18 ಡಿಸಿಪಿಗಳು, ಬಹುತೇಕ ಎಲ್ಲಾ ವಲಯದ ಎಸಿಪಿಗಳು, ಪೊಲೀಸ್ ಇನ್ಸ್ಪೆಕ್ಟರ್, ಪಿಎಸ್ಐ ಸೇರಿದಂತೆ ಒಟ್ಟು 5,000 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿಯಾಗಿ 52 ಕೆಎಸ್ಆರ್ಪಿ, 26 ಸಿಎಆರ್ ತುಕಡಿಗಳು ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸಲಿವೆ.
ಯಲಹಂಕ ವಾಯುನೆಲೆಯ ಪ್ರವೇಶ ದ್ವಾರದ ಮುಂದೆ 1500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಏರ್ ಶೋನಲ್ಲಿ ಭಾಗಿಯಾಗುವ ಅತಿ ಗಣ್ಯ ಹಾಗೂ ಗಣ್ಯರು ಈಗಾಗಲೇ ನಗರಕ್ಕೆ ಬಂದಿದ್ದು, ವಾಸ್ತವ್ಯ ಹೂಡಿರುವ ಸ್ಟಾರ್ ಹೋಟೆಲ್ಗಳ ಮುಂದೆ ಪೊಲೀಸ್ ಚೌಕಿ ತೆರೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಓದಿ: ಏರೋ ಇಂಡಿಯಾ ಶೋನಲ್ಲಿ ಭಾರತದ ಆಧುನಿಕ ತಂತ್ರಜ್ಞಾನದ ಪ್ರದರ್ಶನ: ರಾಜನಾಥ್ ಸಿಂಗ್
ವಿಮಾನ ಹಾರಾಟಕ್ಕೆ ಅಡಚಣೆಯಾಗುವ ಡ್ರೋನ್ಗಳು, ಪ್ಯಾರಾಚೂಟ್, ಮೈಕ್ರೋ ಲೈಟ್ಸ್, ಸಣ್ಣ ಪ್ರಮಾಣದ ಏರ್ಕ್ರಾಪ್ಟ್, ಬಲೂನ್, ಏರಿಯಲ್ ವೆಹಿಕಲ್ಸ್, ರೊಬೋಟಿಕ್ ಆಟೋ ಮಷಿನ್ಗಳಿಗೆ ನಿಷೇಧ ಹೇರಲಾಗಿದೆ. ಯಾವುದೇ ರೀತಿಯ ಗಾಳಿಪಟ ಮತ್ತು ಪಾರಿವಾಳ ಹಾರಾಡದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ವೈಮಾನಿಕ ಪ್ರದರ್ಶನ ನಡೆಯುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ 15 ದಿನಗಳ ಹಿಂದೆಯೇ ಬಿಬಿಎಂಪಿ ಮಾಂಸ ಮಾರಾಟ ನಿಷೇಧಿಸಿದೆ.