ಬೆಂಗಳೂರು: ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಆದರೆ ಕೊರೊನಾ ಟೆಸ್ಟ್ ನಡೆಸಿದ ಬಳಿಕ ಪೊಲೀಸರ ವಶದಲ್ಲಿರುವ ಆರೋಪಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಪಾದರಾಯನಪುರದ ಸುಮಾರು 126 ಮಂದಿ ಪೊಲೀಸರ ವಶದಲ್ಲಿದ್ದಾರೆ. ಈಗಾಗಲೇ ನ್ಯಾಯಾಲಯ ಕೂಡ ಆರೋಪಿಗಳಿಗೆ ಕೋವಿಡ್-19 ಪರೀಕ್ಷೆ ನಡೆಸಿ ಪಾಸಿಟಿವ್ ಬಂದರೆ ಆರೋಗ್ಯ ಇಲಾಖೆ ನಿಯಮದ ಪ್ರಕಾರ ನಡೆದುಕೊಳ್ಳುವಂತೆ ಸೂಚಿಸಿದೆ. ಹೀಗಾಗಿ ಜಾಮೀನು ಸಿಕ್ಕರೂ ಬಿಡುಗಡೆಯಾಗಬೇಕಾದರೆ ನೆಗೆಟಿವ್ ರಿಪೋರ್ಟ್ ಬರಬೇಕು.
ಈ ಹಿಂದೆ ಪಾದರಾಯನಪುರದ ಬಳಿ ಬಿಬಿಎಂಪಿ ಹಾಗೂ ಆರೋಗ್ಯಾಧಿಕಾರಿಗಳು ಕೊರೊನಾ ಸೋಂಕಿತನ ಸಂಪರ್ಕದಲ್ಲಿದ್ದ 58 ಜನರನ್ನ ಕ್ವಾರಂಟೈನ್ ಮಾಡಲು ಕರೆದುಕೊಂಡು ಬರುತ್ತಿದ್ದರು. ಈ ವೇಳೆ 126 ಆರೋಪಿಗಳು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಸೀಲ್ಡೌನ್ಗೆ ಅಳವಡಿಸಿದ್ದ ಮಾಡಿದ್ದ ಬ್ಯಾರಿಕೇಡ್ಗಳನ್ನು ಕಿತ್ತು ಹಾಕಿ, ರಂಪಾಟ ಮಾಡಿದ್ದರು. ಬಳಿಕ ಆರೋಪಿಗಳನ್ನ ಬಂಧಿಸಿದ ಪೊಲೀಸರು ರಾಮನಗರ ಜೈಲಿಗೆ ಶಿಫ್ಟ್ ಮಾಡಿದ್ದರು. ಈ ಆರೋಪಿಗಳ ಪೈಕಿ ಕೆಲವರಿಗೆ ಕೊರೊನಾ ಸೋಂಕು ಇದ್ದ ಹಿನ್ನೆಲೆ ನಗರದ ಹಜ್ಭವನದಲ್ಲಿ ಇರಿಸಲಾಗಿತ್ತು. ಸದ್ಯ ಜಾಮೀನು ಸಿಕ್ಕಿದ್ದರೂ ಕೂಡ ಕೊರೊನಾ ಟೆಸ್ಟ್ ಪಾಸ್ ಆದ ಬಳಿಕ ಹೊರ ಬರಬೇಕಾದ ಅನಿವಾರ್ಯತೆ ಎದುರಾಗಿದೆ.