ಬೆಂಗಳೂರು: ವಿದೇಶದಲ್ಲಿ ಉದ್ಯೋಗ ಹುಡ್ಕೋ ಹೆಣ್ಮಕ್ಳೇ ನೀವು ತುಂಬಾ ಹುಷಾರ್ ಆಗಿರಬೇಕು. ಒಳ್ಳೆ ಕೆಲಸ, ಕೈ ತುಂಬ ಸಂಬಳದ ಆಫರ್, ಟ್ರಾವೆಲ್ ಫೇರ್, ಲಾಡ್ಜ್ ಫೀಸ್ ಎಲ್ಲಾ ಉಚಿತವಾಗಿ ನೀಡಿ, ಕೆಲಸ ಖಚಿತ ಎಂಬ ಬಣ್ಣದ ಆಫರ್ ನಂಬಿ ಹೋದ್ರೆ ಪಾಪರ್ ಆಗೋದು ಗ್ಯಾರಂಟಿ. ಯಾಕಂದ್ರೆ ದುಬೈನಲ್ಲಿ ಕೆಲಸದ ಆಮಿಷ ತೋರಿಸಿ ಯುವತಿಯರನ್ನ ಬೆಂಗಳೂರಿನಿಂದ ದುಬೈಗೆ ಕಳ್ಳ ಸಾಗಾಣೆ ಮಾಡುತ್ತಿದ್ದ ಜಾಲದ ಆರೋಪಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಆಂಧ್ರ ಮೂಲದ ಆರೋಪಿ ನರಸಿಂಹ ಎಂಬಾತ 10 ವರ್ಷದಿಂದ ಪೊಲೀಸರ ಕಣ್ಣು ತಪ್ಪಿಸಿ, ಕರ್ನಾಟಕ ಮತ್ತು ಆಂಧ್ರ ಪ್ರದೇಶದ ವಿದ್ಯಾವಂತ ಯುವತಿಯರಿಗೆ ಅರಬ್ ದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಎನ್ನಲಾಗುತ್ತಿದೆ. ಚೆನೈ ಮತ್ತು ಬೆಂಗಳೂರಿನಿಂದ ಶ್ರೀಲಂಕಾಗೆ ಮಧ್ಯವರ್ತಿ ಮೂಲಕ ಕಳುಹಿಸಿ ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದ ಎನ್ನಲಾಗುತ್ತಿದೆ.
ಈ ಮಾಹಿತಿ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸರಿಗೆ ಲಭ್ಯವಾಗಿದ್ದು, ನರಸಿಂಹನ ಚಲನವಲನದ ಮೇಲೆ ನಿಗಾ ಇಟ್ಟಿದ್ದ ಪೊಲೀಸ್ರು ಇದೀಗ ರೆಡ್ ಹ್ಯಾಂಡ್ ಆಗಿ ಹಿಡಿದು ಕಂಬಿ ಹಿಂದೆ ತಳ್ಳಿದ್ದಾರೆ. ಇದುವರೆಗೂ ಅರಬ್ ದೇಶಗಳಿಗೆ 60ಕ್ಕೂ ಹೆಚ್ಚು ಯುವತಿಯರನ್ನು ಕಳ್ಳ ಸಾಗಾಣೆ ಮಾಡಿರುವ ವಿಚಾರ ಬೆಳಕಿಗೆ ಬಂದಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.