ಬೆಂಗಳೂರು: ರಾಜ್ಯ ಸರ್ಕಾರ ಜನರ ನೆರವಿಗೆ ನಿಲ್ಲದೆ ತನ್ನ ಪಾಲಿನ ತೆರಿಗೆ ಹೆಚ್ಚಳ ಮಾಡಿ ಗಾಯದ ಮೇಲೆ ಬರೆ ಎಳೆದಿದೆ. ಈ ಕೂಡಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ದರವನ್ನು ಇಳಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ಮೌರ್ಯ ವೃತ್ತದಲ್ಲಿ "ಬೈಕ್ ತಳ್ಳು" ಎಂಬ ವಿನೂತನ ಪ್ರತಿಭಟನೆ ನಡೆಸಿದರು.
ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಮನೆಮುರುಕ ಕೇಂದ್ರ ಬಿಜೆಪಿ ಹಾಗೂ ರಾಜ್ಯ ಸರ್ಕಾರದ ನಿರ್ಧಾರಗಳಿಂದ ಯಾರ ಮನೆಯೂ ಉದ್ಧಾರವಾಗಿಲ್ಲ. ಎಲ್ಲಾ ಹಂತದಲ್ಲಿಯೂ ಜನಸಾಮಾನ್ಯರ ಕತ್ತು ಹಿಸುಕಿ ಕೊಲ್ಲಲಾಗುತ್ತಿದೆ. ಭಾರತದ ಇತಿಹಾಸದಲ್ಲೇ ಪೆಟ್ರೋಲ್ ಬೆಲೆ ಭಾರೀ ಹೆಚ್ಚಳ ಮಾಡಿ ಜನರನ್ನು ವಂಚಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷ ಇದೇ ವೇಳೆ ಕಚ್ಚಾ ತೈಲದ ಬೆಲೆ 62 ಡಾಲರ್ ಇತ್ತು. ಈಗ 40 ಡಾಲರ್‌ಗೆ ಇಳಿದಿದೆ. ಆದರೂ ಪೆಟ್ರೋಲ್ ಬೆಲೆ ₹86 ರೂ.ಗಿಂತ ಹೆಚ್ಚಿದೆ. ಪ್ರಧಾನಿ ನರೇಂದ್ರ ಮೋದಿಯವರು "ತಿನ್ನಲ್ಲ, ತಿನ್ನಲು ಬಿಡುವುದಿಲ್ಲ" ಎಂದು ಭಜನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಓದಿ: ತೈಲ ಬೆಲೆ ಏರಿಕೆ ಖಂಡಿಸಿ ಎಸ್‌ಯುಸಿಐಸಿ ಪ್ರತಿಭಟನೆ
ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಪೆಟ್ರೋಲ್ನ್ನು 40 ರೂ.ಗೆ ನೀಡಬಹುದು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಅಲ್ಲದೆ ಕಚ್ಚಾ ತೈಲವನ್ನು ಸಂಸ್ಕರಿಸಲು ಕೇವಲ 30 ರೂಪಾಯಿ ಖರ್ಚಾಗುತ್ತದೆ ಎಂದಿದ್ದಾರೆ. ಹಾಗಾದರೆ ಸರ್ಕಾರಕ್ಕೂ ಕಳ್ಳನಿಗೂ ಏನು ವ್ಯತ್ಯಾಸ ಎಂದು ಪ್ರಶ್ನಿಸಿದರು.