ಬೆಂಗಳೂರು : ನಗರದಲ್ಲಿ ಸುಪ್ರೀಂಕೋರ್ಟ್ ಪೀಠವನ್ನು ಸ್ಥಾಪಿಸುವಂತೆ ಬೆಂಗಳೂರು ವಕೀಲರ ಸಂಘ(ಎಎಬಿ) ಅಧ್ಯಕ್ಷ ಎ ಪಿ ರಂಗನಾಥ್ ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠವನ್ನು ಸ್ಥಾಪಿಸಬೇಕು ಎಂಬುದು ಕಕ್ಷಿದಾರರು ಮತ್ತು ವಕೀಲರ ದೀರ್ಘಾವಧಿಯ ಮನವಿಯಾಗಿದೆ. ದೆಹಲಿಯಲ್ಲಿರುವ ಸುಪ್ರೀಂಕೋರ್ಟ್ಗೆ ತೆರಳಿ ಅರ್ಜಿ ದಾಖಲಿಸಲು ಹಾಗೂ ವಿಚಾರಣೆ ಮುಂದುವರಿಸಿಕೊಂಡು ಹೋಗಲು ದಕ್ಷಿಣ ಭಾರತದ ಜನರು ಸಾಕಷ್ಟು ಹಣ ಭರಿಸಬೇಕಾಗುತ್ತಿದೆ.
ಜನರಿಗೆ ನ್ಯಾಯದಾನ ಪ್ರಕ್ರಿಯೆ ಸುಲಭವಾಗಿ ಲಭಿಸುವಂತೆ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ಅಗತ್ಯ ಸುಧಾರಣೆ ತರಬೇಕಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಬೆಂಗಳೂರು ವಿಶ್ವದರ್ಜೆಯ ಮೂಲಸೌಕರ್ಯ ಹೊಂದಿದೆ. ದಕ್ಷಿಣ ಭಾರತದ ಜನರೆಲ್ಲರೂ ತ್ವರಿತವಾಗಿ ಭೇಟಿ ನೀಡಹುದಾದ ನಗರವಾಗಿದೆ.
ಭೌಗೋಳಿಕ ಪರಿಸರವು ಸಹ ಸುಪ್ರೀಂಕೋರ್ಟ್ನ ದಕ್ಷಿಣ ಭಾರತದ ಪೀಠವನ್ನು ಸ್ಥಾಪಿಸಲು ಸೂಕ್ತವಾಗಿದೆ. ಆದ್ದರಿಂದ ಬೆಂಗಳೂರಿನಲ್ಲಿ ಸುಪ್ರೀಂಕೋರ್ಟ್ನ ಪೀಠವನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.
ಇದನ್ನೂ ಓದಿ: ಇಂದು ಯಡಿಯೂರಪ್ಪಾಜಿ ಜೊತೆ ನನ್ನ ಪಯಣದ ಅತ್ಯಂತ ಬೇಸರದ ದಿನ: ರೇಣುಕಾಚಾರ್ಯ