ಬೆಂಗಳೂರು: ಕಡಿಮೆ ಅವಧಿಯಲ್ಲಿ ಶ್ರೀಮಂತನಾಗುವ ಆಸಯಿಂದ ತಾನು ಕೆಲಸ ಮಾಡುತ್ತಿದ್ದ ಜ್ಯೂವೆಲ್ಲರಿ ಶಾಪ್ನಲ್ಲಿಯೇ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರ್ತಪೇಟೆಯ ನಿವಾಸಿ ಸಿದ್ದೇಶ್ವರ್ ಹರಿಭಾ ಸಿಂಧೆ ನೀಡಿದ ದೂರಿನ ಮೇರೆಗೆ ಮಹಾರಾಷ್ಟ್ರ ಸೊಲ್ಲಾಪುರದ ಮೂಲದ ಸ್ವಪ್ನಿಲ್ ಘಾಡ್ಗೆ ಎಂಬಾತನನ್ನು ಬಂಧಿಸಲಾಗಿದೆ. ಈತನಿಂದ 4.58 ಕೋಟಿ ರೂ.ಮೌಲ್ಯದ 11 ಕೆಜಿ 200ಗ್ರಾಂ ಚಿನ್ನದ ಗಟ್ಟಿಯನ್ನು ಜಪ್ತಿ ಮಾಡಲಾಗಿದೆ.
ಸ್ವಪ್ನಿಲ್ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುವ ಮುನ್ನ ಹೈದರಾಬಾದಿನ ಜ್ಯೂವೆಲ್ಲರಿ ಶಾಪ್ವೊಂದರಲ್ಲಿ ಚಿನ್ನ ಕರಗಿಸುವ ಕೆಲಸ ಮಾಡುತ್ತಿದ್ದ. ಕೊರೊನಾ ಬಿಕ್ಕಟ್ಟು ಹಿನ್ನೆಲೆ ಕಳೆದ ವರ್ಷ ನವೆಂಬರ್ನಲ್ಲಿ ತನ್ನ ಊರಿಗೆ ವಾಪಸ್ ಹೋಗಿದ್ದ. ಸ್ನೇಹಿತರ ಮೂಲಕ 3 ತಿಂಗಳ ಹಿಂದೆ ದೂರುದಾರರ ಸನ್ ಸ್ಕಾರ್ ರಿಪೈನರಿ ಎಂಟರ್ ಪ್ರೈಸಸ್ ಚಿನ್ನ ಗಟ್ಟಿ ಮಾಡುವ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದ.
ಮೊದಲು ಒಂದಷ್ಟು ದಿನ ನೆಟ್ಟಗೆ ಕೆಲಸ ಮಾಡಿದವನು ನಂತರ ಅತಿಯಾಸೆಗೆ ಬಿದ್ದ. ಪ್ರತಿ ದಿನ ಚಿನ್ನದ ಗಟ್ಟಿ ಮಾಡುತ್ತಿದ್ದವನಿಗೆ ಅವೆಲ್ಲವನ್ನೂ ಕದ್ದು ಎಸ್ಕೇಪ್ ಆಗಲು ಸ್ಕೆಚ್ ಹಾಕಿದ್ದ. ಅಲ್ಲಿದ್ದ ಕೆಲಸಗಾರರ ಜೊತೆ ಸೇರಿ ಮಾಲೀಕನ ಆಣತಿ ಮೇರೆಗೆ ಈತನೇ 12 ಕೆಜಿ ಚಿನ್ನವನ್ನು ಕರಗಿಸಿ ಮಾಲೀಕನ ಸಂಬಂಧಿಕರ ಮನೆಯಲ್ಲಿ ಇಟ್ಟು ಬಂದಿದ್ದ.
ಮಾರನೇ ದಿನ ಯಾರ ಸಮ್ಮತಿಯೂ ಇಲ್ಲದೇ ಮಾಲೀಕನ ಸಂಬಂಧಿಕರ ಮನೆಗೆ ಹೋಗಿ ಯಾಜಮಾನರು ಬಂದಿದ್ದಾರೆ ಗಟ್ಟಿಗಳನ್ನು ಕೊಡುವುದಕ್ಕೆ ಹೇಳಿದ್ದಾರೆ ಎಂದು ಚಿನ್ನದ ಗಟ್ಟಿಗಳನ್ನು ತೆಗೆದುಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಶೇಷ ತಂಡ ರಚಿಸಿ ಕೇವಲ 10 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಟನ್ ಪೇಟೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ನಗರ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್ ಅನುಚೇತ್ ತಿಳಿಸಿದ್ದಾರೆ.
ಇದನ್ನೂ ಓದಿ: ಟ್ರ್ಯಾಕ್ಟರ್ ರೋಟಾವೇಟರ್ಗೆ ಸಿಲುಕಿ ಕೂಲಿ ಕಾರ್ಮಿಕ ದಾರುಣ ಸಾವು