ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಸಿ ಅಥವಾ ಡಿ ಗ್ರೂಪ್ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿವೋರ್ವನಿಂದ ಆರೋಪಿಗಳು 10 ಲಕ್ಷ ರೂ. ಪೀಕಿದ್ದಾರೆ. ಹುಬ್ಬಳ್ಳಿ ನಗರದ ನಿವಾಸಿ ಅನಿಲ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ದಿಲೀಪ್ ಅಡಿವೆಪ್ಪ ಗಸ್ತಿ (40) ಎಂಬುವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
2017ರಲ್ಲಿ ಧಾರವಾಡದಲ್ಲಿರುವ ಶ್ರೀಕಾಂತ್ ಹುಲುಕೋಟಿ ಎಂಬುವರ ಮೂಲಕ ಆರೋಪಿ ದಿಲೀಪ್ ಪರಿಚಯವಾಗಿತ್ತು. 10 ಲಕ್ಷ ರೂ. ನೀಡಿದರೆ ರೈಲ್ವೆ ಇಲಾಖೆಯಲ್ಲಿ ಸಿ ಅಥವಾ ಡಿ ಗ್ರೂಪ್ ಕೆಲಸ ಮಾಡಿಸಿಕೊಡುವುದಾಗಿ ಹೇಳಿದ್ದರು. ನಿಮಗೆ ಸಾಧ್ಯವಾದಾಗ ಹಣ ನೀಡಿ ಎಂದಿದ್ದ ಆತ, 10 ಲಕ್ಷ ರೂ. ಕೈ ಸೇರಿದ ಬಳಿಕ ನಿಮಗೆ ಕೆಲಸ ಕೊಡಿಸುತ್ತೇನೆ ಎಂದಿದ್ದರು. ಅದರಂತೆ ನಾನು ಸಹ ಸರ್ಕಾರಿ ಕೆಲಸ ಸಿಗುತ್ತದೆ ಎಂಬ ಆಸೆಯಿಂದ 2017 ಆ.18ರಂದು ನನ್ನ ಬ್ಯಾಂಕ್ ಖಾತೆಯಿಂದ ದಿಲೀಪ್ ಸೂಚನೆ ಮೇರೆಗೆ ಆತನ ಪತ್ನಿಯ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಗೆ ಸ್ವಲ್ಪ ಹಣ ಜಮೆ ಮಾಡಿದ್ದೆ ಎಂದು ಹೇಳಿದ್ದಾರೆ.
ಇದಾದ ಬಳಿಕ ಮತ್ತೆ ಕರೆ ಮಾಡಿದ ದಿಲೀಪ್, ನಿಮ್ಮ ಕೆಲಸ ಆಗಿದೆ, ನೀವು ಕೂಡಲೇ ಬಾಕಿ ಹಣವನ್ನು ಜಮಾ ಮಾಡಿ ಎಂದು ಸೂಚಿಸಿದ್ದ. ಇದನ್ನು ನಂಬಿ, ಆತ ಹೇಳಿದಂತೆ ಹಂತ ಹಂತವಾಗಿ 10 ಲಕ್ಷ ರೂಗಳನ್ನು ಆತನ ಬ್ಯಾಂಕ್ ಖಾತೆಗೆ ಹಾಕಿದ್ದೆ. ಆದರೆ, ಇದೂವರೆಗೆ ಹಣವನ್ನ ಹಿಂತಿರುಗಿಸದೆ, ಕೆಲಸವನ್ನೂ ಸಹ ಕೊಡಿಸದೆ ವಂಚಿಸಿದ್ದಾನೆ ಎಂದು ವಂಚನೆಗೊಳಗಾದ ಅನಿಲ್ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.