ಬೆಂಗಳೂರು : ಬಿ ಪ್ಯಾಕ್ 2022ರ ಫೆಬ್ರವರಿ-ಮೇ ಅವಧಿಯಲ್ಲಿ ಬಿಬಿಎಂಪಿಯ 8 ವಲಯದ 186 ವಾರ್ಡ್ ವ್ಯಾಪ್ತಿಯಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಬೆಂಗಳೂರು ನಗರದ ಒಟ್ಟಾರೆ ಆಡಳಿತ ವ್ಯವಸ್ಥೆಯ ಬಗ್ಗೆ ಶೇ 57ರಷ್ಟು ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಬಿ ಪ್ಯಾಕ್ ವ್ಯವಸ್ಥಾಪಕ ಟ್ರಸ್ಟಿ ರೇವತಿ ಅಶೋಕ್ ತಿಳಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಗರಿಕ ಗ್ರಹಿಕೆ ಸಮೀಕ್ಷೆಯಲ್ಲಿ ನಾಗರಿಕ ಸೇವೆಗಳಿಗೆ ನಾಗರಿಕರ ಆದ್ಯತೆ ಮತ್ತು ಬೆಂಗಳೂರು ನಗರದಲ್ಲಿ ಸೇವೆಗಳ ವಿತರಣೆಯ ಗುಣಮಟ್ಟ, ಆದ್ಯತೆ ಮತ್ತು ನಗರದಲ್ಲಿನ ಸೇವೆಗಳ ವಿತರಣೆಯ ಗುಣಮಟ್ಟದ ಬಗ್ಗೆ ನಾಗರಿಕರ ಗ್ರಹಿಕೆ ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ ಸಮೀಕ್ಷೆಯನ್ನು ಮೂರು ವಿಭಾಗಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.
ಆಡಳಿತ ಮತ್ತು ನಾಗರಿಕ ಸೌಕರ್ಯ, ಸೇವೆಗಳ ವಿತರಣೆಯು ಹೆಚ್ಚಿನ ಮಟ್ಟದ ಅಸಮಾಧಾನವನ್ನು ಹೊಂದಿರುವ ವಲಯವಾಗಿ ಹೊರ ಹೊಮ್ಮಿದೆ. ರಸ್ತೆ ನಿರ್ವಹಣೆ, ಕುಡಿಯುವ ನೀರು, ಕಸ ತೆಗೆಯುವಿಕೆ ಮತ್ತು ಘನತ್ಯಾಜ್ಯ ನಿರ್ವಹಣೆ, ತ್ಯಾಜ್ಯ ನೀರು ನಿರ್ವಹಣೆ, ಸಾರ್ವಜನಿಕ ಶೌಚಾಲಯ ವ್ಯವಸ್ಥೆಗಳ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದೆ ಎಂದು ಇದೇ ವೇಳೆ ಹೇಳಿದರು.
ಮತದಾನ ಮಾಡುವುದಾಗಿ ಶೇ 93ರಷ್ಟು ಜನರ ಹೇಳಿಕೆ : ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 40ರಷ್ಟು ಮಂದಿ ಮತದಾನದ ಚೀಟಿ ಹೊಂದಿರದೆ ಹಾಗೂ ಶೇ 40ರಷ್ಟು ಮಂದಿ ಮತದಾನದ ದಿನ ನಗರದಿಂದ ಹೊರ ಹೋಗಿರುವುದು ಮತದಾನ ಮಾಡದಿರಲು ಕಾರಣವಾಗಿದೆ. ಜತೆಗೆ ಮುಂಬರಲಿರುವ ಚುನಾವಣೆಯಲ್ಲಿ, ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 93ರಷ್ಟು ಜನರು ಮತದಾನ ಮಾಡುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ 2814 ಚಾಲಕರ ಹುದ್ದೆಗಳ ಶೀಘ್ರ ನೇಮಕ : ಸಚಿವ ಶ್ರೀರಾಮುಲು