ಬೆಂಗಳೂರು: ಹಣಕಾಸು ಸಚಿವಾಲಯದ ಅಧಿಸೂಚನೆಯಂತೆ ಇಂದಿನಿಂದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಲ ನಿಯಮಿತ ಮಾರುವ ಮೊಸರು, ಮಜ್ಜಿಗೆ ಹಾಗೂ ಲಸ್ಸಿ ಉತ್ಪನ್ನಗಳ ಮೇಲೆ ಶೇ.5ರಷ್ಟು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವಿಧಿಸಲಾಗುತ್ತಿದೆ.
ಹಳೆಯ ದರ ನಮೂದಿಸಲಾಗಿದ್ದರೂ ಮೊಸರಿನ 200 ಗ್ರಾಂ, ಅರ್ಧ ಹಾಗೂ ಒಂದು ಲೀಟರ್ ಬೆಲೆಗೆ ಕ್ರಮವಾಗಿ ಜಿಎಸ್‌ಟಿ ವಿಧಿಸಿರುವುದರಿಂದ 12 (2ರೂ. ಏರಿಕೆ), 24 (2ರೂ. ಏರಿಕೆ) ಹಾಗೂ 46 ರೂ.(3 ರೂ. ಏರಿಕೆ) ನಿಗದಿಪಡಿಸಲಾಗಿದೆ. ಹಿಂದಿನ ಬೆಲೆಗೆ ಹೋಲಿಸಿದರೆ 2ರೂ ರಿಂದ 3 ರೂ. ದರ ಏರಿಕೆಯಾದಂತಾಗಿದೆ.
200 ಮಿ.ಲೀ ಮಜ್ಜಿಗೆ, ಟೆಟ್ರಾ ಪ್ಯಾಕ್ ಹಾಗೂ ಪೆಟ್ ಬಾಟಲ್ ದರವು ಕ್ರಮವಾಗಿ 8, 11 ಹಾಗೂ 13 ರೂ. ಗಳಾಗಿದೆ (1 ರೂ ಹೆಚ್ಚಳ). ಇನ್ನೂ 200 ಮಿ.ಲೀ ಲಸ್ಸಿ (11ರೂ.), ಟೆಟ್ರಾ ಪ್ಯಾಕೇಟ್ ಸಾದಾ (21 ರೂ.), ಟೆಟ್ರಾ ಪ್ಯಾಕ್ ಮ್ಯಾಂಗೋ (27 ರೂ.), ಪೆಟ್ ಬಾಟಲ್ ಸಾದಾ (16 ರೂ.), ಪೆಟ್ ಬಾಟಲ್ ಮ್ಯಾಂಗೋ (21 ರೂ.) ಬೆಲೆ ನಿಗದಿಪಡಿಸಲಾಗಿದೆ.
ದಾಸ್ತಾನು ಇರುವವರೆಗೆ ಹಳೆಯ ದರಗಳ ಮುದ್ರಿತ ಸರಕು: ದಾಸ್ತಾನು ಮುಗಿಯುವ ತನಕ ಸರಕುಗಳ ಮೇಲೆ ಹಳೆಯ ದರಗಳ ಮುದ್ರಣ ಇರಲಿದೆ. ಸದ್ಯ ಇಂಕ್ಜೆಟ್ ಮೂಲಕ ಪರಿಷ್ಕೃತ ದರಗಳನ್ನು ಮುದ್ರಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಬದಲಾದ ಮುದ್ರಿತ ದರಗಳ ಸರಕುಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಕೆಎಂಎಫ್ ನಿರ್ದೇಶಕರು ತಿಳಿಸಿದ್ದಾರೆ.
ಬೆಲೆ ಹೆಚ್ಚಳಕ್ಕೆ ಸಾರ್ವಜನಿಕರ ಆಕ್ರೋಶ: ಈಗಾಗಲೇ ಕೋವಿಡ್, ಅತಿವೃಷ್ಟಿ, ವಿದ್ಯುತ್ ದರ ಏರಿಕೆ ಮತ್ತು ಮುಂತಾದ ಕಾರಣಗಳಿಂದ ಕಂಗಾಲಾಗಿರುವ ಸಾಮಾನ್ಯ ಜನತೆಗೆ ಹಾಲು ಉತ್ಪನ್ನಗಳ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಮುರ್ಮು VS ಸಿನ್ಹಾ: ಇಂದು ರಾಷ್ಟ್ರಪತಿ ಚುನಾವಣೆಗೆ ಮತದಾನ, ಸಕಲ ಸಿದ್ಧತೆ