ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ ಕೋವಿಡ್ ಸೋಂಕಿತರಿಗೆ ದೈಹಿಕ ಟ್ರಯಾಜ್ ಮೂಲಕ ಅವಲೋಕಿಸಿ ತ್ವರಿತವಾಗಿ ಆರೈಕೆ ಮಾಡುವ ನಿಟ್ಟಿನಲ್ಲಿ 26 ಟ್ರಯಾಜ್ ಸೆಂಟರ್‌ಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ 6 ಟ್ರಯಾಜ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ.
ಟ್ರಯಾಜ್ ಸೆಂಟರ್ಗಳಲ್ಲಿ ವೈದ್ಯರ ತಂಡವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಕೋವಿಡ್ ಸೋಂಕಿತರ ವೈದ್ಯಕೀಯ ಸ್ಥಿತಿಯನ್ನು ನೇರವಾಗಿ ತಿಳಿದು ಔಷದೋಪಚಾರ ವ್ಯವಸ್ಥೆ ತಕ್ಷಣ ಒದಗಿಸಬಹುದಾಗಿದೆ.
ಭೌತಿಕ ಟ್ರಯಾಜ್ ಸೆಂಟರ್ಗಳಲ್ಲಿ ಆಮ್ಲಜನಕಯುಕ್ತ ಹಾಸಿಗೆಗಳಿದ್ದು, ಎಲ್ಲಾ ಪ್ರಾಥಮಿಕ ಆರೋಗ್ಯ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಇಲ್ಲಿ ಕಡಿಮೆ ರೋಗ ಲಕ್ಷಣದ ರೋಗಿಗಳಿಗೆ ಚಿಕಿತ್ಸೆ ನೀಡುವ ಮತ್ತು ರೋಗಿಗಳಿಗೆ ಆರೈಕೆ ನೀಡುವ ವ್ಯವಸ್ಥೆಯಿದೆ.
ಟ್ರಯಾಜ್ ಸೆಂಟರ್ನಲ್ಲಿ 3 ವೈದ್ಯರು ಹಾಗೂ 3 ನರ್ಸ್ಗಳು ದಿನದ 24 ಗಂಟೆಯೂ ಸೇವೆಯಲ್ಲಿ ನಿರತರಾಗಿದ್ದು ಕಾರ್ಯ ನಿರ್ವಹಿಸಲಿದ್ದಾರೆ. ಸೋಂಕಿತರ ಆರೋಗ್ಯ ಪರಿಸ್ಥಿತಿ ಅವಲೋಕಿಸಲು ಪಲ್ಸ್ ಆಕ್ಸಿ ಮೀಟರ್, ಥರ್ಮಲ್ ಸ್ಕ್ಯಾನ್, ಅಗತ್ಯ ಔಷಧಗಳನ್ನು ದಾಸ್ತಾನು ಮಾಡಿಟ್ಟುಕೊಂಡಿರಲಾಗಿರುತ್ತದೆ. ಸೋಂಕಿತ ವ್ಯಕ್ತಿಗಳಿಗೆ ಸ್ಥಳದಲ್ಲಿಯೇ ವೈದ್ಯಕೀಯ ಕಿಟ್ಗಳನ್ನು ಸಹ ನೀಡಲಾಗುತ್ತದೆ.
ಟ್ರಯಾಜ್ ಸೆಂಟರ್ಗಳಿಗೆ ಕೋವಿಡ್ ಸೋಂಕಿತರು ನೇರವಾಗಿ ಬರಬಹುದಾಗಿದ್ದು, ಸದರಿ ಸೆಂಟರ್ಗಳಿಗೆ ನೋಡಲ್ ಅಧಿಕಾರಿಗಳ ಸಂಪರ್ಕ ಸಂಖ್ಯೆ ಮತ್ತು ದಿನದ 24 ಗಂಟೆ ಕಾರ್ಯನಿರ್ವಹಿಸುವ ಟ್ರಯಾಜ್ ಸೆಂಟರ್ಗಳ ಸಂಪರ್ಕ ಸಂಖ್ಯೆಗಳನ್ನು ನೀಡಿದ್ದು, ಆ ಮೂಲಕ ಟ್ರಯಾಜ್ ಸೆಂಟರ್ಗಳಿಗೆ ನೇರವಾಗಿ ಹೋಗಿ ದಾಖಲಾಗಬಹುದಾಗಿದೆ.
ಕೋವಿಡ್ ಸೋಂಕಿತರು ನೇರವಾಗಿ ಆಸ್ಪತ್ರೆಗೆ ಹೋಗದೆ, ಪಾಲಿಕೆ ಸ್ಥಾಪಿಸಿರುವ ಟ್ರಯಾಜ್ ಸೆಂಟರ್ಗಳಿಗೆ ಬಂದು ವೈದ್ಯರು ನೀಡುವ ಸಲಹೆಯನ್ನು ಅನುಸರಿಸಿ ಸೋಂಕಿತರಿಗೆ ಗೃಹ (ಹೋಮ್) ಪ್ರತ್ಯೇಕತೆ, ಕೋವಿಡ್ ಆರೈಕೆ ಕೇಂದ್ರ ಅಥವಾ ಅವಶ್ಯಕತೆಯಿದ್ದಲ್ಲಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಲಾಗುತ್ತದೆ.
26 ಟ್ರಯಾಜ್ ಸೆಂಟರ್ಗಳ ಕಾರ್ಯಾಚರಣೆಯ ಮಾಹಿತಿ: ನಗರದ ಕೋವಿಡ್ ಆರೈಕೆ ಕೇಂದ್ರ ಹಾಗೂ ಹೆರಿಗೆ ಆಸ್ಪತ್ರೆಗಳಲ್ಲಿ 26 ಟ್ರಯಾಜ್ ಸೆಂಟರ್‌ಗಳನ್ನು ತೆರೆಯಲಾಗಿದೆ. ಸದರಿ ಕೇಂದ್ರಗಳಲ್ಲಿ ಒಟ್ಟು 2,486 ಹಾಸಿಗೆಗಳಿದ್ದು, 1995 ಸಾಮಾನ್ಯ ಹಾಗೂ 491 ಆಕ್ಸಿಜನ್ ಬೆಡ್ಗಳಿವೆ.
ಟ್ರಯಾಜ್ ಸೆಂಟರ್ಗಳಿಗೆ ನಿನ್ನೆಯವರೆಗೆ 283 ಮಂದಿ ನೇರವಾಗಿ ಬಂದಿದ್ದು, ಅವರ ಟ್ರಯಾಜ್ ಮಾಡಲಾಗಿದೆ. ಇಂದು ಸಂಜೆ 6 ಗಂಟೆವರೆಗೂ, 260 ಮಂದಿಯನ್ನು ಈ 26 ಪಿಟಿಸಿಗಳಲ್ಲಿ ಟ್ರಯಾಜ್ ಮಾಡಲಾಗಿದೆ.
ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ಹಾಗೂ ನೇರವಾಗಿ ಬಂದವರು ಸೇರಿದಂತೆ ಒಟ್ಟು 991 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 1495 ಹಾಸಿಗೆಗಳು ಚಿಕಿತ್ಸೆಗೆ ಲಭ್ಯವಿರುತ್ತವೆ.
26 ಟ್ರಯಾಜ್ ಸೆಂಟರ್ಗಳಿಗೆ 65 ಮಾರ್ಷಲ್ಗಳನ್ನು ನಿಯೋಜನೆ ಮಾಡಲಾಗಿರುತ್ತದೆ. 6 ಹೆಚ್ಚುವರಿ ಟ್ರಯಾಜ್ ಸೆಂಟರ್ಗಳಿಗೆ ಮಾರ್ಷಲ್ಗಳ ಜೊತೆಗೆ ಸಿ.ಯೂ.ಜಿ ಸಂಖ್ಯೆಯ ಮೊಬೈಲ್ ದೂರವಾಣಿ ಪ್ರತ್ಯೇಕವಾಗಿ ಒದಗಿಸಲಾಗಿದೆ. 6 ಹೆಚ್ಚುವರಿ ಟ್ರಯಾಜ್ ಸೆಂಟರ್ನ ವಿವರಗಳ ಪಟ್ಟಿಯನ್ನು ಹೆಚ್ಚಿನ ಮಾಹಿತಿಗಾಗಿ ಲಗತ್ತಿಸಿದೆ.
ಓದಿ: ರಾಜ್ಯದಲ್ಲಿ ತೌಕ್ತೆ ಅಬ್ಬರ: ಚಂಡಮಾರುತಕ್ಕೆ ನಾಲ್ವರು ಬಲಿ, 216 ಮನೆಗಳಿಗೆ ಹಾನಿ