ದೊಡ್ಡಬಳ್ಳಾಪುರ: ನಗರದ ಹೃದಯ ಭಾಗದಲ್ಲಿರುವ ನಾಗರಕೆರೆಯಲ್ಲಿ ನಿಗೂಢ ರೀತಿಯಲ್ಲಿ ಮೀನುಗಳು ಸಾಯುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
ಕಳೆದ ಎರಡು ದಿನಗಳಿಂದ ಕೆರೆಯಲ್ಲಿ ಮೀನುಗಳು ಸಾಯುತ್ತಿದ್ದು, ಇವು ದಡಕ್ಕೆ ತೇಲಿ ಬರುತ್ತಿವೆ. ಈ ಸತ್ತ ಮೀನುಗಳನ್ನ ಜನ ಮನೆಗೆ ಕೊಂಡೊಯ್ಯುತ್ತಿದ್ದು, ಪಕ್ಷಿಗಳು ಸತ್ತ ಮೀನುಗಳನ್ನು ತಿನ್ನುತ್ತಿವೆ. ಆದರೆ ಮೀನುಗಳ ಸಾವಿಗೆ ಇನ್ನೂ ಕಾರಣ ತಿಳಿದು ಬಂದಿಲ್ಲ.
ಕೆರೆಯ ಒಡಲಿಗೆ ನಗರದ ತ್ಯಾಜ್ಯ ನೀರು ಸೇರುತ್ತಿದ್ದು, ಜೊತೆಗೆ ಒಳಚರಂಡಿಯ ಪೈಪ್ ಲೈನ್ ಸಹ ಕೆರೆಯಲ್ಲಿ ಹಾದು ಹೋಗಿದೆ. ಒಳಚರಂಡಿಯ ಮ್ಯಾನ್ ಹೋಲ್ನಿಂದ ಸಹ ತ್ಯಾಜ್ಯ ನೀರು ಕೆರೆ ಸೇರುತ್ತಿದ್ದು, ನಗರದ ತ್ಯಾಜ್ಯ ನೀರಿನಲ್ಲಿ ಹಾನಿಕಾರಕ ಅಂಶಗಳಿವೆ. ಇದು ನೇರವಾಗಿ ಕೆರೆಗೆ ಸೇರುತ್ತಿರುವುದರಿಂದ ಮೀನುಗಳು ಸಾವನ್ನಪ್ಪಿರಬಹುದೆಂಬ ಸಂಶಯ ವ್ಯಕ್ತವಾಗಿದೆ.
ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮೀನುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ನಿಖರವಾದ ಕಾರಣ ತಿಳಿಯಬೇಕು. ಅಲ್ಲಿಯವರೆಗೂ ಕೆರೆಯಲ್ಲಿನ ಮೀನುಗಳನ್ನು ಯಾರೂ ಹಿಡಿದು ತಿನ್ನದಂತೆ ಸೂಚನೆ ನೀಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.