ದೊಡ್ಡಬಳ್ಳಾಪುರ: ಗಂಡನ ಕುಡಿತದ ಚಟಕ್ಕೆ ಬೇಸತ್ತು ಪತ್ನಿ ತವರು ಮನೆಗೆ ಬಂದ್ದಿದ್ದಳು. ಇದೇ ಕೋಪದಲ್ಲಿ ಯುಗಾದಿಯಂದು ಹೆಂಡತಿಯ ಮನೆಗೆ ಬಂದ ಗಂಡ ಅತ್ತೆ-ಮಾವ ಇಬ್ಬರಿಗೂ ಚಾಕುವಿನಿಂದ ಇರಿದಿದ್ದಾನೆ.
ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಶ್ರೀನಿವಾಸ್ (65), ಜಯಮ್ಮ (60) ಅಳಿಯನಿಂದ ಚೂರಿ ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಮಂಜುನಾಥ್ (40)ನನ್ನು ದೊಡ್ಡಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ: ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ದೇವಸ್ಥಾನದ ಬಳಿಯ ನಿವಾಸಿಗಳಾದ ಶ್ರೀನಿವಾಸ್ ಮತ್ತು ಜಯಮ್ಮ ದಂಪತಿ ತಮ್ಮ ಮಗಳಾದ ಅನುಸೂಯಳನ್ನು ಗೌರಿಬಿದನೂರು ನಗರದ ಮಂಜುನಾಥ್ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಇಬ್ಬರಿಗೂ ಮದುವೆಯಾಗಿ 22 ವರ್ಷಗಳಾಗಿದ್ದು, ಮಕ್ಕಳೊಂದಿಗೆ ಗೌರಿಬಿದನೂರಿನ ಧೋಬಿ ಕಾಲೋನಿಯಲ್ಲಿ ವಾಸವಾಗಿದ್ದರು. ಕಟಿಂಗ್ ಶಾಪ್ ಇಟ್ಟುಕೊಂಡಿದ್ದ ಮಂಜುನಾಥ್ ಸಂಪಾದನೆಯ ಹಣವನ್ನು ಕುಡಿದು ಮುಗಿಸುತ್ತಿದ್ದನಂತೆ. ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಅನುಸೂಯ ಸಂಸಾರದ ಹೊರೆ ಹೊತ್ತಿದ್ದಳು. ಇಷ್ಟಾದರು ಮಂಜುನಾಥ್ ಹೆಂಡತಿಯ ನಡೆಯ ಬಗ್ಗೆ ಸಂಶಯಪಟ್ಟು ಜಗಳ ಮಾಡುತ್ತಿದ್ದನಂತೆ. ಇದರಿಂದ ಬೇಸತ್ತ ಅನುಸೂಯ 9 ದಿನಗಳ ಹಿಂದೆ ತವರು ಮನೆಗೆ ಬಂದಿದ್ದಳು.
ಓದಿ : ಅಪ್ರಾಪ್ತೆಯರನ್ನೇ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ಕಾಮುಕ ಅಂದರ್
ಯುಗಾದಿಯಂದು ಹೆಂಡತಿ ಮನೆಗೆ ಬಂದ ಮಂಜುನಾಥ್ ಆಕೆಗೆ ಚಾಕುವಿನಿಂದ ಇರಿಯಲು ಮುಂದಾಗಿದ್ದ. ಈ ವೇಳೆ ಅಡ್ಡ ಬಂದ ಅತ್ತೆ-ಮಾವನಿಗೆ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತಕ್ಕೆ ಒಳಗಾದ ಶ್ರೀನಿವಾಸ್ ಮತ್ತು ಜಯಮ್ಮರನ್ನು ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಮಂಜುನಾಥ್ನನ್ನು ಬಂಧಿಸಲಾಗಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.