ದೊಡ್ಡಬಳ್ಳಾಪುರ : ತಾಲೂಕಿನ ಸೀಗೆಪಾಳ್ಯ ಗ್ರಾಮದ ಸುಮಾರು 60 ವರ್ಷದ ವೃದ್ಧ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಆತನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ದೊಡ್ಡಬಳ್ಳಾಪುರ ಸೀಗೆಹಳ್ಳಿ ಮೂಲದ ವ್ಯಕ್ತಿ ಬೆಂಗಳೂರಿನ ಪಾಪರೆಡ್ಡಿಪಾಳ್ಯದ ನಿವಾಸಿಯಾಗಿದ್ದರು. ಅನಾರೋಗ್ಯ ನಿಮಿತ್ತ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ವೃದ್ಧನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಮೇ 16 ರಂದು ನೆಲಮಂಗಲ ತಾಲೂಕಿನ ತಂಗಿ ಮನೆಗೆ ಭೇಟಿ ನೀಡಿದ್ದ ಅವರು, ಬಾಣಂತಿ ಮತ್ತು ಮಗುವಿನ ಆರೋಗ್ಯ ವಿಚಾರಿಸಿದ್ದರು. ಕೆಲ ದಿನಗಳ ಹಿಂದಷ್ಟೆ ಮೃತ ವ್ಯಕ್ತಿ ಸ್ವಗ್ರಾಮವಾದ ದೊಡ್ಡಬಳ್ಳಾಪುರ ತಾಲೂಕಿನ ಸೀಗೆಹಳ್ಳಿ ಗ್ರಾಮಕ್ಕೂ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆತನ ಕುಟುಂಬದವರು ಸೇರಿದಂತೆ 20 ಜನರನ್ನು ಕ್ವಾರಂಟೈನ್ ಮಾಡಲು ತಯಾರಿ ನಡೆಸಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎಸ್.ರವೀಂದ್ರ ತಿಳಿಸಿದ್ದಾರೆ.