ಹೊಸಕೋಟೆ: ರಾಜ್ಯದ ಜನರಿಗೆ ನಿಷ್ಠೆ, ಪ್ರಾಮಾಣಿಕತೆ ಮತ್ತು ಜನಹಿತ ರಾಜಕಾರಣದ ಬಗ್ಗೆ ತಿಳಿಸುವ ಜತೆಗೆ ಭ್ರಷ್ಟಾಚಾರ ನಿರ್ಮೂಲನೆ ಜನಜಾಗೃತಿ ಮತ್ತು ಸಂಘಟನೆಗಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರಾಜ್ಯದಾದ್ಯಂತ ಸೈಕಲ್ ಯಾತ್ರೆ ಹಮ್ಮಿಕೊಂಡಿದೆ ಎಂದು ಕೆಆರ್‌ಎಸ್ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದರು.
ನಗರದಲ್ಲಿ ಸೆಪ್ಟೆಂಬರ್ 14 ರಂದು ಚಲಿಸು ಕರ್ನಾಟಕ ಕೆಆರ್‌ಎಸ್ ಸೈಕಲ್ ಯಾತ್ರೆ ಕೋಲಾರದಿಂದ ಆರಂಭವಾಗಿ ಶಿಡ್ಲಘಟ್ಟ, ವಿಜಿಪುರ, ದೇವನಹಳ್ಳಿ, ಸೂಲಿಬೆಲೆ ಮೂಲಕ ಇಂದು ನೂರಕ್ಕೂ ಹೆಚ್ಚು ಕೆಆರ್ ಎಸ್ ಪಕ್ಷದ ಸದಸ್ಯರು ಸೈಕಲ್ ಸವಾರಿ ಮಾಡಿಕೊಂಡು ಹೊಸಕೋಟೆಗೆ ತಲುಪಿದರು.
ಹೊಸಕೋಟೆಯ ತಹಶಿಲ್ದಾರ್ ಕಚೇರಿಯ ಮುಂದೆ ಬಸವಣ್ಣನವರ ಮೂರ್ತಿಗೆ ಹೂವಿನ ಹಾರ ಹಾಕಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸೈಕಲ್ ಜಾತದ ಪ್ರಮುಖ ಉದ್ದೇಶವನ್ನು ರಾಜ್ಯದಲ್ಲಿ ಆಗುತ್ತಿರುವ ಭ್ರಷ್ಟಾಚಾರ, ಲಂಚ,ಅಧಿಕಾರಿಗಳ ದೌರ್ಜನ್ಯ ರಾಜಕೀಯ ಪಕ್ಷಗಳ ಅಧಿಕಾರ ಆಸೆ ಇವುಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದರು.
ನಂತರ ಕೆಆರ್‌ಎಸ್ ಪಕ್ಷದ ಸಂಸ್ಥಾಪಕ ರವಿ ಕೃಷ್ಣ ರೆಡ್ಡಿ ಅವರು ಮಾತನಾಡಿ, ನಾಡಿನ ಜನರು ಆಡಳಿತ ಮತ್ತು ವಿರೋಧ ಪಕ್ಷಗಳ ಆಡಳಿತ ವ್ಯವಸ್ಥೆ ನೋಡಿ ರೋಸಿ ಹೋಗಿದ್ದು, ಕೊರೊನಾ ಹೆಸರಿನಲ್ಲಿ ಲೂಟಿ ಹೊಡೆಯುತ್ತಿರುವ ಬಿಜೆಪಿ ಸರ್ಕಾರ ಹಾಗೂ ಅವ್ಯವಸ್ಥೆ ವಿರುದ್ದ ಸರಿಯಾಗಿ ಧ್ವನಿ ಎತ್ತದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ನೊಂದಿರುವ ಜನರ ಅವಶ್ಯಕತೆ ಮತ್ತು ನಾಡಿ ಮಿಡಿತವನ್ನು ಅರಿಯುವ ಉದ್ದೇಶದಿಂದ ಈ ಯಾತ್ರೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಚಲಿಸು ಕರ್ನಾಟಕ ಹೆಸರಿನಲ್ಲಿ 2,700 ಕೀ.ಮೀ.ಸೈಕಲ್ ಯಾತ್ರೆಯನ್ನು ಹಮ್ಮಿಕೊಂಡಿದ್ದು, ಮೊದಲ ಹಂತದ 15 ದಿನಗಳ ಯಾತ್ರೆಗೆ ಸೆಪ್ಟೆಂಬರ್ 14ರಂದು ಕೋಲಾರದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈ ಯಾತ್ರೆ ಚಿಕ್ಕಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಮಾಲೂರು, ಆನೆಕಲ್, ಬೆಂಗಳೂರು, ರಾಮನಗರ, ಜಿಲ್ಲೆಗಳ ಮೂಲಕ ಸಾಗಿ ಸೆ.18ರಂದು ಮದ್ದೂರು ಮತ್ತು ಸೆ.19ರಂದು ಮಂಡ್ಯವನ್ನು ತಲುಪಲಿದೆ ಎಂದರು.
ನಂತರ ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಾಗುವ ಸೈಕಲ್ ಯಾತ್ರೆಯ ಸಮಾರೋಪ ಕಾರ್ಯಕ್ರಮವು ಸೆ.18ರಂದು ತುಮಕೂರಿನ ಶಿರಾದಲ್ಲಿ ನಡೆಯಲಿದೆ. ಅಂತಿಮ ಹಂತದ ಯಾತ್ರೆ ನವೆಂಬರ್ 23ರಂದು ಬೆಳಗಾವಿಯಿಂದ ಪ್ರಾರಂಭವಾಗಿ ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಚರಿಸಲಿದೆ.
ಪ್ರತಿ ತಾಲೂಕಿನ ಕಚೇರಿಗೆ ಭೇಟಿ ನೀಡಿ ಅಲ್ಲಿನ ಭ್ರಷ್ಟಾಚಾರದ ಬಗ್ಗೆ ನಿರ್ಮೂಲನೆ ಮಾಡುವ ಬಗ್ಗೆ ನಮ್ಮ ಪಕ್ಷದ ವತಿಯಿಂದ ಅಧಿಕಾರಿಗಳಿಗೆ ಮನವಿ ಕೊಡುತ್ತೇವೆ. ಬಡ ಹಾಗೂ ಅಸಹಾಯಕ ಜನರಿಗೆ ನಮ್ಮ ನಾಯಕರು ಸಹಾಯಕ್ಕೆ ಬರುತ್ತಾರೆ ಎಂದು ತಿಳಿಸಿದರು.