ದೇವನಹಳ್ಳಿ: ಕೊರೊನಾ ಸಮಯದಲ್ಲಿ ತೆಗೆದುಕೊಂಡ ಸುರಕ್ಷತೆಯ ಕ್ರಮಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಏರ್ಪೋರ್ಟ್ ಹೆಲ್ತ್ ಅಕ್ರೆಡಿಟೇಶನ್ (AHA) ಮಾನ್ಯತೆ ಪಡೆದಿದೆ.
ಪ್ರಪಂಚದಾದ್ಯಂತ ಆವರಿಸಿದ ಕೊರೊನಾದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಬಂದ್ ಮಾಡಲಾಗಿತ್ತು. ಮತ್ತೆ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಪ್ರಾರಂಭವಾದರೂ ವೈರಸ್ ಭಯದಿಂದ ವಿಮಾನಯಾನಕ್ಕೆ ಜನ ಭಯಪಡುತ್ತಿದ್ದರು. ಪ್ರಯಾಣಿಕರಲ್ಲಿ ಸುರಕ್ಷತೆಯ ಭಾವನೆಯನ್ನುಂಟು ಮಾಡಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಸಂಪರ್ಕ ರಹಿತ ಸೇವೆ ಮತ್ತು ಸೋಂಕು ನಿವಾರಕ ಕ್ರಮಗಳನ್ನು ಪ್ರಾರಂಭದಿಂದಲೂ ತೆಗೆದುಕೊಂಡ ಹಿನ್ನೆಲೆ ಪ್ರಯಾಣಿಕರ ಮೆಚ್ಚುಗೆಗೆ ಸಹ ಕಾರಣವಾಗಿತ್ತು.
ಪ್ರಯಾಣಿಕರು ಎಂದಿನಂತೆ ಏರ್ಪೋರ್ಟ್ ಮೂಲಕ ಪ್ರಯಾಣಿಸಲು ಆರಂಭಿಸಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಸ್ವಚ್ಛತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳಿಂದ ಏರ್ಪೋರ್ಟ್ ಹೆಲ್ತ್ ಅಕ್ರೆಡಿಟೇಶನ್ (AHA) ಮಾನ್ಯತೆ ಪಡೆದಿದೆ.
ಇದನ್ನೂ ಓದಿ: ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಆರಂಭ: ಯಾರು ಹಾಜರ್, ಯಾರು ಗೈರು?
ಸರಕು ಸಾಗಾಣಿಕೆಯಲ್ಲಿ ಕೆಐಎಎಲ್ ಸಾಧನೆ
ಸರಕು ಸಾಗಾಣಿಕೆಯಲ್ಲಿಯೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಾಧನೆ ಮಾಡಿದೆ. ವರ್ಷದಿಂದ ವರ್ಷಕ್ಕೆ ಸರಕು ಸಾಗಾಣಿಕೆಯಲ್ಲಿ ದಕ್ಷಿಣ ಭಾರತದ ಅತ್ಯಂತ ಚಟುವಟಿಕೆಯ ವಿಮಾನ ನಿಲ್ದಾಣವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2008ರಿಂದ ಪ್ರಾರಂಭವಾದ ಈ ಸೇವೆ ಇಲ್ಲಿಯವರೆಗೆ ಅಂದರೆ 2020ರ ಡಿಸೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಸರಕು ಸಾಗಾಣಿಕೆಯಾಗಿದೆ. ಡಿಸೆಂಬರ್ ತಿಂಗಳಲ್ಲಿ ಒಟ್ಟು 30,053 ಮೆಟ್ರಿಕ್ ಟನ್ ಸರಕು ಸಾಗಾಣಿಕೆಯಾಗಿದೆ.