ನೆಲಮಂಗಲ: ದೇವರ ಹುಂಡಿಗೆ ಹಣ ಹಾಕಬೇಕೆಂದು 500 ನೋಟು ಇಟ್ಟ ಅಪರಿಚಿತರು ವೃದ್ಧೆಯೊಬ್ಬಳ ಬಳಿಯ 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ದೋಚಿ ಪರಾರಿಯಾದ ಘಟನೆ ನಗರದ ದೇವಾಂಗ ಬೀದಿಯಲ್ಲಿ ನೆಡೆದಿದೆ. ಮುಸುಕುಧಾರಿಗಳಾಗಿ ಬಂದಿದ್ದ ದುಷ್ಕರ್ಮಿಗಳ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೈಕ್ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಶ್ರೀರಾಮನ ದೇವಸ್ಥಾನದ ಬಳಿ ಮಡಿಕೆ ವ್ಯಾಪಾರ ಮಾಡುತ್ತಿದ್ದ 60 ವರ್ಷದ ವೃದ್ಧೆ ನಂಜಮ್ಮ ಎಂಬಾಕೆಗೆ ಟೋಪಿ ಹಾಕಿ ಪರಾರಿಯಾಗಿದ್ದಾರೆ. ಪ್ಲಾನ್ ಮಾಡಿಕೊಂಡೇ ವೃದ್ಧೆ ಬಳಿ ಬಂದ ಮುಸುಕುಧಾರಿಗಳು ದೇವರ ಹುಂಡಿಗೆ 500 ರೂ. ಹಣ ಹಾಕಬೆಕೇಂದು ಭಕ್ತರಂತೆ ನಟಿಸಿದ್ದಾರೆ. ವೃದ್ಧೆ ನಂಜಮ್ಮ ಅಪರಿಚಿತರ ಮಾತು ನಂಬಿ ದೇವಸ್ಥಾನದ ಬಾಗಿಲು ತೆಗೆದು ಒಳ ಹೋಗಿದ್ದಾಳೆ.
ಒಳ ಹೋಗುತ್ತಿದ್ದಂತೆ ದೇವರ ಮುಂದೆ 500 ನೋಟು ಇಟ್ಟ ಅಪರಿಚಿತರು, ನೋಟಿನ ಮೇಲೆ ಚಿನ್ನದ ಸರ ಇಡುವಂತೆ ಭಕ್ತಿಯ ಪರಾಕಾಷ್ಟೆ ತೋರಿಸಿದ್ದಾರೆ. ಚಿನ್ನದ ಸರ ಇಟ್ಟ ನಂತರ ಇದ್ದಕ್ಕಿಂದ್ದಂತೆ ಜ್ಞಾನ ತಪ್ಪಿದ ವೃದ್ಧೆ, ಕೆಲ ಸಮಯದ ನಂತರ ಎದ್ದು ನೋಡುತ್ತಿದ್ದಂತೆ ತನ್ನ ಬಳಿ ಇದ್ದ 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಎಗರಿಸಿದ್ದು ಗೊತ್ತಾಗಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣಾದಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು ಪೊಲೀಸರು ಮುಸುಕುಧಾರಿಗಳಿಗಾಗಿ ಶೋಧನೆ ನಡೆಸಿದ್ದಾರೆ.