ದೊಡ್ಡಬಳ್ಳಾಪುರ : ಲಾಕ್ ಡೌನ್ ಸಮಯದಲ್ಲಿ ಜನರ ಹಸಿವು ನೀಗಿಸಲು ಶಾಸಕ ಟಿ. ವೆಂಕಟರಮಣಯ್ಯ ನೇತೃತ್ವದಲ್ಲಿ ನಗರದಲ್ಲಿ ಒಂದು ತಿಂಗಳು 40 ಕೇಂದ್ರಗಳಲ್ಲಿ ಅನ್ನದಾಸೋಹ ಮಾಡಿ, ಪ್ರತಿದಿನ 15 ಸಾವಿರ ಜನರಿಗೆ ಆಹಾರ ವಿತರಣೆ ಮಾಡಲಾಗಿದೆ.
ದೊಡ್ಡಬಳ್ಳಾಪುರ ನಗರದಲ್ಲಿ 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಹೆಚ್ಚಿನ ನೇಕಾರಿಕೆ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ನೇಕಾರಿಕೆ ನಿಂತು ಹೋಗಿತ್ತು, ಕೈಗಾರಿಕೆಗಳ ಬಾಗಿಲು ಬಂದ್ ಆಗಿದ್ದವು. ಆ ಸಮಯದಲ್ಲಿ ನಗರದ ಉದ್ಯಮಿಗಳು ಮತ್ತು ದಾನಿಗಳ ನೆರವಿನಿಂದ ಶಾಸಕ ಟಿ. ವೆಂಕಟರಮಣಯ್ಯ ಆಹಾರ ವಿತರಣೆ ಮಾಡಿದ್ದರು.
ಮಾರ್ಚ್ 31 ರಿಂದ ಪ್ರಾರಂಭವಾದ ಶಾಸಕರ ಅನ್ನದಾಸೋಹ ಕಾರ್ಯಕ್ರಮ ಜೂನ್ 30ಕ್ಕೆ ಅಂತ್ಯವಾಗಿದೆ. ನಗರದ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಆಹಾರ ತಯಾರಿಸಿ 40 ಕೇಂದ್ರಗಳಲ್ಲಿ ವಿತರಣೆ ಮಾಡಲಾಗುತ್ತಿತ್ತು. ಪ್ರತಿದಿನ 15 ಸಾವಿರಕ್ಕೂ ಅಧಿಕ ಮಂದಿ ಆಹಾರ ಪಡೆಯುತ್ತಿದ್ದರು.
ಓದಿ : ಕೃಷ್ಣಾ ನದಿ ದುರಂತ: ಮೃತ ಸಹೋದರರ ಕುಟುಂಬಕ್ಕೆ ಪರಿಹಾರಕ್ಕಾಗಿ ಸಿಎಂಗೆ ಮನವಿ- ಶಾಸಕ ಕುಮಟಳ್ಳಿ
ಒಂದು ತಿಂಗಳು ನಡೆದ ಅನ್ನದಾಸೋಹದಲ್ಲಿ 49,600 ಕೆ.ಜಿ ಅಕ್ಕಿ, 496 ಟಿನ್ ಎಣ್ಣೆ, 310 ಗ್ಯಾಸ್ ಸಿಲಿಂಡರ್, 7,750 ಕೆ.ಜಿ ತರಕಾರಿ, 2,480 ಕೆ.ಜಿ ಮಸಾಲೆ ಪದಾರ್ಥ, 4,65,000 ಆಹಾರದ ಪೊಟ್ಟಣಗಳನ್ನು ಬಳಕೆ ಮಾಡಲಾಗಿದೆ. ನಗರದ 40 ಕಡೆಗೆ ಆಹಾರ ಸಾಗಿಸಲು 4 ಟಾಟಾ ಏಸ್ ವಾಹನ ಮತ್ತು 4 ಆಟೋಗಳನ್ನು ಬಳಸಲಾಗಿದೆ.
ಅನ್ನ ದಾಸೋಹ ವೀಕ್ಷಣೆ ಮಾಡಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್, ಶಾಸಕರಾದ ಕೃಷ್ಣಬೈರೇಗೌಡ, ಜಮೀರ್ ಅಹಮದ್, ಹೆಚ್.ಎಂ ರೇವಣ್ಣ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು.