ದೇವನಹಳ್ಳಿ: ಬೆಂಗಳೂರು-ಯಲಹಂಕದ-ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ ನಗರಕ್ಕೆ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಗಳು ರಾಷ್ಟ್ರೀಯ ಹೆದ್ದಾರಿ 7ರಲ್ಲಿನ ಫ್ಲೈ ಓವರ್ ಇಳಿಯದೆ, ನಿಲುಗಡೆ ಸ್ಥಳದಿಂದ ದೂರದಲ್ಲಿ ನಿಲುಗಡೆ ಮಾಡುತ್ತಿವೆ. ಜತೆಗೆ ಪ್ರಯಾಣಿಕರ ನಿಲುಗಡೆ ಸ್ಥಳಕ್ಕೆ ಟಿಕೆಟ್ ಕೊಡುವ ಬದಲಿಗೆ ಚಿಕ್ಕಬಳ್ಳಾಪುರಕ್ಕೆ ಟಿಕೆಟ್ ಕೊಟ್ಟು ಪ್ರಯಾಣಿಕರಿಂದ ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ.
ಪ್ರಯಾಣಿಕ ಸದಾಶಿವ ಎಂಬುವರು ಈ ಬಗ್ಗೆ ವಿಡಿಯೋ ಮಾಡಿ, ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಬರುವ ಬಸ್ಗಳು ನಾಗಾರ್ಜುನ ಕಾಲೇಜು ಮತ್ತು ನಂದಿಕ್ರಾಸ್ ಬಳಿ ನಿಲುಗಡೆ ಕೊಡಬೇಕು. ಈ ನಿಲುಗಡೆ ಸ್ಥಳಗಳಲ್ಲಿ ಫ್ಲೈ ಓವರ್ ಇರುವುದರಿಂದ ಬಸ್ಗಳು ಫ್ಲೈ ಓವರ್ ಇಳಿದು ಸರ್ವಿಸ್ ರಸ್ತೆಗೆ ಬಂದು ನಿಲುಗಡೆ ಕೊಡಬೇಕು. ಆದರೆ ಈ ಬಸ್ಗಳು ಫ್ಲೈ ಓವರ್ ಮೇಲೆ ಹೋಗಿ ದೂರದಲ್ಲಿ ನಿಲುಗಡೆ ಕೊಡುತ್ತಿದೆ. ಇದರಿಂದ ಪ್ರಯಾಣಿಕರು ರಾತ್ರಿ ವೇಳೆ ದೂರದಿಂದ ಬಸ್ ಇಳಿದು ನಡೆದುಕೊಂಡು ಬರಬೇಕಾದ ಸ್ಥಿತಿ ಇದೆ ಎಂದು ಅಳಲು ತೋಡಿಕೊಂಡರು.
ಸದಾಶಿವ ಅವರು ನಿನ್ನೆ ರಾತ್ರಿ ದೇವನಹಳ್ಳಿ ಬಳಿ ಕೆಎಸ್ಆರ್ಟಿಸಿ ಬಸ್ ಹತ್ತಿದ್ದು, ನಂದಿ ಕ್ರಾಸ್ನಲ್ಲಿ ಇಳಿಯಬೇಕಿತ್ತು. ದೇವನಹಳ್ಳಿಯಿಂದ ನಂದಿ ಕ್ರಾಸ್ಗೆ 17 ರೂ.ಟಿಕೆಟ್ ದರ ಇದೆ. ಆದರೆ ಬಸ್ ಬಸ್ ಕಂಡಕ್ಟರ್ ನಂದಿಕ್ರಾಸ್ಗೆ ಟಿಕೆಟ್ ಕೊಡುವ ಬದಲಿಗೆ ಚಿಕ್ಕಬಳ್ಳಾಪುರಕ್ಕೆ ಇರುವ 28 ರೂ.ಟಿಕೆಟ್ ಕೊಟ್ಟಿದ್ದಾರೆ. ಹೆಚ್ಚುವರಿಯಾಗಿ 11 ರೂ.ಸುಲಿಗೆ ಮಾಡಿದ್ದಲ್ಲದೇ, ನಿಲುಗಡೆ ಸ್ಥಳದಿಂದ ದೂರದಲ್ಲಿ ನಿಲುಗಡೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಕಂಡಕ್ಟರ್ಗೆ ತರಾಟೆ: ಈ ಬಗ್ಗೆ ಸದಾಶಿವ ವಿಭಾಗೀಯ ಸಂಚಾರ ಅಧಿಕಾರಿಗೆ ಮೊಬೈಲ್ ಕರೆ ಮಾಡಿ ದೂರು ನೀಡಿದ್ದರು. ದೂರವಾಣಿ ಕರೆಯಲ್ಲಿಯೇ ಕಂಡಕ್ಟರ್ಗೆ ತರಾಟೆಗೆ ತೆಗೆದುಕೊಂಡು ಅಧಿಕಾರಿಗಳು ಜನಸ್ನೇಹಿಯಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದರು. ಅಲ್ಲದೇ ಡಿಪೋಗೆ ಹೋಗುವ ಬಸ್ಗಳು ಎಲ್ಲೆಡೆ ನಿಲುಗಡೆ ನೀಡುವಂತೆ ಸೂಚನೆ ನೀಡಿದ್ದಾರೆ.
ಆದರೆ ಕಂಡಕ್ಟರ್ ಮೊದಲಿನಂತೆಯೇ ತಮ್ಮ ದರ್ಪವನ್ನು ಸಾರ್ವಜನಿಕರ ಮೇಲೆ ತೋರಿಸುತ್ತಿದ್ದಾರೆ. ಜನರಿಗೆ ಸೇವೆ ನೀಡಬೇಕಾದ ಕೆಎಸ್ಆರ್ಟಿಸಿ ಸಂಸ್ಥೆ ಈ ಮಾರ್ಗದಲ್ಲಿ ಸೇವೆಯನ್ನು ನೀಡುತ್ತಿಲ್ಲ ಮತ್ತು ಹೆಚ್ಚುವರಿ ಹಣ ಟಿಕೆಟ್ ಕೊಟ್ಟು ಹಣ ಸುಲಿಗೆ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಕೆಎಸ್ಆರ್ಟಿಸಿ ಪ್ರಯಾಣಿಕಸ್ನೇಹಿ ಸಂಸ್ಥೆಯನ್ನಾಗಿ ಮಾಡಬೇಕಿದೆ ಎಂಬುವುದು ಸದಾಶಿವ ಅವರ ಆಗ್ರಹ.
ಇದನ್ನೂ ಓದಿ: ಗದಗ ಕೆಎಸ್ಆರ್ಟಿಸಿ ಮಹಾ ಎಡವಟ್ಟು..ಗಂಡಭೇರುಂಡ ಬದಲು ಮಹಾರಾಷ್ಟ್ರ ಸರ್ಕಾರದ ಲಾಂಛನ