ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ಮೂಲಕ 2020ರ ಏಪ್ರಿಲ್‍ನಿಂದ ಆಗಸ್ಟ್ ನಡುವೆ 1,80,745 ಕೆ.ಜಿ.ಗಳಷ್ಟು ದಾಳಿಂಬೆ ರಫ್ತು ಮಾಡಲಾಗಿದ್ದು, ಈ ಮೂಲಕ ಭಾರತದಲ್ಲಿ ದಾಳಿಂಬೆ ರಫ್ತಿಗೆ ಮುಂಚೂಣಿಯ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಪ್ರಾಧಿಕಾರ(ಎಪಿಇಡಿಎ) ಮತ್ತು ವಾಣಿಜ್ಯ ಬೇಹುಗಾರಿಕೆ ಹಾಗೂ ಅಂಕಿ-ಅಂಶಗಳ ಪ್ರಧಾನ ನಿರ್ದೇಶನಾಲಯ(ಡಿಜಿಸಿಐಎಸ್) ಮಾಹಿತಿ ಪ್ರಕಾರ, ಕರ್ನಾಟಕದಿಂದ ರಫ್ತಾಗುವ ಶೇ 99ರಷ್ಟು ದಾಳಿಂಬೆ ಕೆಐಎಎಲ್ ಮೂಲಕ ವಿದೇಶಗಳಿಗೆ ಹೋಗುತ್ತದೆ. ಒಂಭತ್ತು ಜಾಗತಿಕ ಸರಕು ಸಾಗಣೆ ವಿಮಾನ ಸಂಸ್ಥೆಗಳಾದ- ಏರ್ ಫ್ರಾನ್ಸ್, ಬ್ರಿಟಿಷ್ ಏರ್ವೇಸ್, ಕ್ಯಾಥೆ ಪೆಸಿಫಿಕ್, ಎಮಿರೇಟ್ಸ್ ಏರ್ಲೈನ್ಸ್, ಎತಿಹಾದ್ ಏರ್ವೇಸ್, ಕೆಎಲ್‍ಎಂ ರಾಯಲ್ ಡಚ್ ಏರ್ಲೈನ್ಸ್, ಕಟಾರ್ ಏರ್ವೇಸ್, ಸಿಂಗಪುರ್ ಏರ್ಲೈನ್ಸ್ ಮತ್ತು ಟರ್ಕಿಷ್ ಏರ್ಲೈನ್ಸ್ಗಳ ಮೂಲಕ 12 ದೇಶಗಳಿಗೆ ದಾಳಿಂಬೆ ರಫ್ತು ಮಾಡಲಾಗುತ್ತಿದೆ. ಸರಕು ಸಾಗಣೆ ಟರ್ಮಿನಲ್ ಕಾರ್ಯಾಚರಣೆ ನಡೆಸುವ ಸಂಸ್ಥೆಗಳಾದ ಏರ್ ಇಂಡಿಯಾ ಸ್ಯಾಟ್ಸ್ ಮತ್ತು ಮೆಂಜೀಸ್ ಏವಿಯೇಷನ್ ಬಬ್ಬಾ ದಾಳಿಂಬೆ ರವಾನಿಸುತ್ತವೆ.
ಟರ್ಮಿನಲ್‍ಗಳಲ್ಲಿ ಹಣ್ಣುಗಳನ್ನು ಇಡುವ ಸಮಯವನ್ನು ಕಡಿಮೆ ಮಾಡುವುದಲ್ಲದೆ, ಅವುಗಳನ್ನು ಅಗತ್ಯ ತಾಪಮಾನ ನಿಯಂತ್ರಿತ ವಾತಾವರಣದಲ್ಲಿ ಇಡುವ ಮೂಲಕ ತಾಜಾತನ ಕಾಪಾಡುತ್ತಿದೆ. ದಕ್ಷಿಣ ಭಾರತದಲ್ಲಿ ಕೆಐಎಎಲ್ ಪ್ರಮುಖ ಸರಕು ಸಾಗಣೆ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಸಮರ್ಪಿತ ಕೋಲ್ಡ್ ಝೋನ್- ಎಐಎಸ್‍ಎಟಿಎಸ್ ಕೂಲ್‍ಪೋರ್ಟ್ – ಎಂಬ ತಂಪುಗೊಳಿಸುವ ಪ್ರದೇಶವಿದ್ದು, ವಾರ್ಷಿಕ 40,000 ಮೆಟ್ರಿಕ್ ಟನ್‍ಗಳಷ್ಟು ವಸ್ತುಗಳನ್ನು ಇದು ನಿಭಾಯಿಸಬಲ್ಲದು. -25ರಿಂದ +25 ಡಿಗ್ರಿ ಸೆಂಟಿಗ್ರೇಡ್‍ಗಳ ತಾಪಮಾನದಲ್ಲಿ ಸರಕುಗಳನ್ನು ಒಂದೇ ಸೂರಿನಡಿ ಇಡುವ ವ್ಯವಸ್ಥೆ ಹೊಂದಿದೆ.