ಬಾಗಲಕೋಟೆ: ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಕೊನೆಗೂ ರಾಜ್ಯ ಸರ್ಕಾರ ಪೂರ್ಣಾವಧಿ ಕುಲಪತಿ ನೇಮಿಸಿ ಆದೇಶ ಹೊರಡಿಸಿದೆ.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹಂಗಾಮಿ ಪ್ರಭಾರಿಯಾಗಿದ್ದ ಕೆ.ಎಂ.ಇಂದ್ರೇಶ್ ಅವರನ್ನು ರಾಜ್ಯಪಾಲ ವಜುಭಾಯ್ ವಾಲಾ ಪೂರ್ಣಾವಧಿ ಕುಲಪತಿಯಾನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಡಾ. ಕೆ.ಎಂ.ಇಂದ್ರೇಶ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಬ್ಬಳ್ಳಿ ಗ್ರಾಮದ ನಿವಾಸಿ. ಇವರು ಬೆಂಗಳೂರು ವಿಶ್ವವಿದ್ಯಾಲಯದ ತೋಟಗಾರಿಕೆಯಲ್ಲಿ ಬಿಎಸ್ಸಿ ಪದವಿ ಹಾಗೂ ತರಕಾರಿ ವಿಜ್ಞಾನದಲ್ಲಿ ಎಂಎಸ್ಸಿ ಹಾಗೂ ಪಿಹೆಚ್ಡಿ ಮಾಡಿದ್ದಾರೆ. 1982ರಲ್ಲಿ ಬೆಂಗಳೂರಿನ ಕೃಷಿ ವಿವಿಯಲ್ಲಿ ವಿಸ್ತರಣಾ ಮಾರ್ಗದರ್ಶಕರಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದಾರೆ. 2010ರಿಂದ 2013ರವರೆಗೆ ಬೆಂಗಳೂರಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.
2013ರಿಂದ 2017ರವರೆಗೆ ಮೈಸೂರು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಆಗಿ ಕೆಲಸ ನಿರ್ವಹಿಸಿದ್ದಾರೆ. 2017ರಿಂದ ಬಾಗಲಕೋಟೆ ತೋಟಗಾರಿಕೆ ಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕುಲಸಚಿವರಾಗಿ ಹಾಗೂ ಶಿಕ್ಷಣ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದರು. ನಂತರ ಕುಲಪತಿ ಹುದ್ದೆಯಿಂದ ನಿವೃತ್ತರಾದ ಬಳಿಕ ಪ್ರಭಾರಿ ಹುದ್ದೆಯಲ್ಲಿದ್ದ ಡಾ. ಕೆ.ಎಂ.ಇಂದ್ರೇಶ್ ಈಗ ಪೂರ್ಣಾವಧಿಗೆ ಕುಲಪತಿಯಾಗಿ ನೇಮಕಗೊಂಡಿದ್ದಾರೆ.