ಬಾಗಲಕೋಟೆ: ಎಲ್ಲಾ ರಾಜಕೀಯ ಪಕ್ಷಗಳು ದಲಿತರನ್ನು ಮತ ಬ್ಯಾಂಕ್ಗಳಾಗಿ ಮಾಡಿಕೊಳ್ಳುತ್ತಾರೆ ಹೊರತು ನಿಜವಾದ ಸಮಸ್ಯೆಗಳ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಎಂದು ಕರ್ನಾಟಕ ದಲಿತ ಮಹಿಳಾ ವೇದಿಕೆ ರಾಜ್ಯಾಧ್ಯಕ್ಷೆ ಸಿ.ಯಶೋಧಾ ಅಸಮಾಧಾನ ವ್ಯಕ್ತಪಡಿಸಿದರು.
ಬಾಗಲಕೋಟೆ ನಗರದ ಖಾಸಗಿ ಹೋಟೆಲ್ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನೆ ಸಮಿತಿ ಹಾಗೂ ರಾಜ್ಯ ದಲಿತ ಮಹಿಳಾ ವೇದಿಕೆಯ ಜಿಲ್ಲಾ ಸಭೆಯಲ್ಲಿ ಅವರು ಮಾತನಾಡಿದರು.
ದಲಿತ ಮಹಿಳೆಯರ ಮೇಲೆ ದೌರ್ಜನ್ಯ ನಡೆದರೂ ಸರ್ಕಾರ ಸರಿಯಾದ ಕ್ರಮ ಜರುಗಿಸುತ್ತಿಲ್ಲ. ವಿಶೇಷ ನ್ಯಾಯಾಲಯ ತೆರೆಯುತ್ತಿಲ್ಲ. ರಾಜ್ಯ ಸೇರಿದಂತೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ದಲಿತರ ಮೇಲೆ, ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ನೀರಿನ ವಿಷಯಕ್ಕೆ ಹಲ್ಲೆ, ಅತ್ಯಾಚಾರ ನಡೆಯುತ್ತಿದ್ದರೂ ಸರಿಯಾದ ಕ್ರಮ ಜರುಗಿಸುತ್ತಿಲ್ಲ ಎಂದು ಹೇಳಿದರು.
ಸರ್ಕಾರಕ್ಕೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವುದಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಒತ್ತಾಯಿಸಿ ಸಾಕಷ್ಟು ಹೋರಾಟ ಮಾಡಿದರು ಪ್ರಯೋಜನ ಆಗಿಲ್ಲ. ಸಾವಿರಾರು ಅರ್ಜಿಗಳನ್ನು ಹಾಕಿದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಂತಹ ದೌರ್ಜನ್ಯ ವಿರುದ್ಧ ಮಹಿಳೆಯರಿಗೆ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಮಾಹಿತಿಯನ್ನು ಎಲ್ಲರಿಗೂ ನೀಡಿ, ಜಾಗೃತಿ ಮೂಡಿಸಿ ದಲಿತ ಮಹಿಳೆಯರಿಗೆ ಹಕ್ಕು ಸಿಗುವಂತೆ ಹೋರಾಟ ಮಾಡಲಾಗುವುದು ಎಂದರು.