ಬಾಗಲಕೋಟೆ: ಬನಹಟ್ಟಿಯ ಕುಡಿಯುವ ನೀರಿನ ಶುದ್ಧೀಕರಣ ಘಟಕ ತೀವ್ರ ಕಲ್ಮಶದಿಂದ ಕೂಡಿದ್ದು, ಘಟಕವನ್ನು ಸ್ವಚ್ಚಗೊಳಿಸುವ ಮೂಲಕ ಶುದ್ಧ ನೀರು ಪೂರೈಕೆಗೆ ನಗರಸಭೆ ಪೌರಾಯುಕ್ತ ಆರ್. ಎಂ. ಕೊಡಗೆ ನೇತೃತ್ವದಲ್ಲಿ ಚಾಲನೆ ದೊರೆತಿದೆ.
ಹಲವಾರು ವರ್ಷಗಳಿಂದ ಇಲ್ಲಿನ ಕುಡಿಯುವ ನೀರಿನ ಘಟಕ ಸ್ವಚ್ಚವಿಲ್ಲದೇ ಗಬ್ಬೆದ್ದು ನಾರುವುದರ ಜೊತೆಗೆ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಅನೈರ್ಮಲ್ಯ ತಾಂಡವವಾಡುತ್ತಿತ್ತು. ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಆರಂಭಿಸಿರುವುದು ಜನರಲ್ಲಿ ಸಂತಸ ತಂದಿದೆ.
ಈಗಾಗಲೇ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ರಾಜ್ಯಕ್ಕೆ ನೀರು ಬಿಟ್ಟಿರುವ ಬಗ್ಗೆ ಮೇಲಾಧಿಕಾರಿಗಳಿಂದ ತಿಳಿದು ಬಂದಿದ್ದು, ನೀರು ತಲುಪಲು ಕನಿಷ್ಠ ನಾಲ್ಕೈದು ದಿನಗಳಾದರೂ ಬೇಕಾಗಬಹುದು. ಅಷ್ಟರಲ್ಲಿ ಇಲ್ಲಿನ ಮಣ್ಣು ಹಾಗೂ ನೀರನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಪೌರಾಯುಕ್ತ ಆರ್. ಎಂ. ಕೊಡಗೆ ತಿಳಿಸಿದರು.