ಬಾಗಲಕೋಟೆ: ಮಕರ ಸಂಕ್ರಮಣ ದಿನದಂದು ಸೂರ್ಯ ತನ್ನ ಪಥ ಬದಲಾವಣೆ ಮಾಡುವ ದಿನ ಅತಿ ಶ್ರೇಷ್ಠ ಎಂದು ಈ ದಿನದಂದು ಸಂಕ್ರಾಂತಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಾರೆ.
ಸೂರ್ಯ ಪಥ ಬದಲಾವಣೆ ಆಗುವ ದಿನದಂದು ಹೇಗೆ ಸಂಕ್ರಾಂತಿ ಆಚರಣೆ ಮಾಡಬೇಕು. ಆರೋಗ್ಯಕರ ಹಾಗೂ ಧನ ಸಂಪತ್ತು ಪಡೆದುಕೊಳ್ಳುವುದಕ್ಕೆ ಆರ್ಯುವೇದ ವೈದ್ಯ ಪಂಡಿತರಾದ ಡಾ. ಶಿವಾನಂದ ರಾಥೋರ್ ಅವರು ಸಮಗ್ರ ಮಾಹಿತಿ ನೀಡಿದ್ದಾರೆ.
ಸಂಕ್ರಾಂತಿ ದಿನದಂದು ಗಂಗೆ ಭೂಮಿಗೆ ಬಂದಳು ಎಂದು ರಾಮಾಯಣ, ಮಹಾಭಾರತದಿಂದ ತಿಳಿಯಲಾಗಿದೆ. ಇಂತಹ ದಿನದಂದು ಶಿವ ಹಾಗೂ ನಾರದ ಭೂಮಿಗೆ ಬಂದು ಪವಿತ್ರವಾದ ಗಂಗೆಯ ಸ್ನಾನ ಮಾಡಿದ್ದಾರೆ. ಇದರ ನಿಮಿತ್ತ ಈಗಲೂ ಸಂಕ್ರಾಂತಿ ದಿನದಂದು ತ್ರಿವೇಣಿ ನದಿ ಸೇರಿದಂತೆ ಇತರ ನದಿಗಳಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಸಂಕ್ರಮಣದ ದಿನದ ಅಂಗವಾಗಿ ನದಿಯಲ್ಲಿ ಸ್ನಾನ ಮಾಡಿದರೆ, ಯಾವುದೇ ರೋಗ ರುಜಿನಗಳು ಹರಡುವುದಿಲ್ಲ. ಹೀಗಾಗಿ, ಪ್ರತಿಯೊಬ್ಬರು ಅರಿಶಿನ ಹಾಗೂ ಎಳ್ಳಿನಿಂದ ಸ್ನಾನ ಮಾಡಬೇಕು ಎಂದು ಡಾ. ರಾಥೋರ್ ತಿಳಿಸಿದ್ದಾರೆ.
ಇನ್ನು ಪೂಜೆ ಮಾಡುವಾಗ ಎಳ್ಳು, ಬೆಲ್ಲದಿಂದ ಮಾಡುವ ಉಂಡೆಯಲ್ಲಿ ಒಂದು ರೂಪಾಯಿ ನಾಣ್ಯ ಹಾಕಿ ಉಂಡೆ ಕಟ್ಟಬೇಕು. ಐದು ಉಂಡೆಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ಉಂಡೆಯಲ್ಲಿ ನಾಣ್ಯ ಹಾಕಿ ಉಂಡೆ ಮಾಡಬೇಕು. ಬಳಿಕ ಈ ಐದು ಉಂಡೆಯನ್ನು ದೇವರ ನೈವೇದ್ಯವಾಗಿ ಸಮರ್ಪಣೆ ಮಾಡಿ, ದೇವರಿಗೆ ಅರ್ಪಣೆ ಮಾಡಬೇಕು.
ಆಗ ಲಕ್ಷ್ಮೀ ಒಲಿದು ಮನೆಯಲ್ಲಿ ಯಾವಾಗಲೂ ಧನ ಸಂಪತ್ತು ಇರುತ್ತದೆ. ಯಾವಾಗಲೂ ಹಣದ ಕೊರತೆ ಆಗಲ್ಲ. ಸದಾ ಸಮೃದ್ಧಿಯ ಜೀವನ ನಡೆಸುವಂತಾಗುತ್ತದೆ ಎಂದು ಡಾ. ಶಿವಾನಂದ ಹೇಳಿದ್ದಾರೆ.
ಓದಿ: ನಾಡಿನಾದ್ಯಂತ ಸಂಕ್ರಾಂತಿ ಸಂಭ್ರಮ; ಹಬ್ಬದ ಮಹತ್ವ, ಆಚರಣೆ ಹೀಗಿದೆ...