ಬಾಗಲಕೋಟೆ : ಮಳೆಯಿಂದಾಗಿ ಘಟಪ್ರಭಾ ನದಿ ಮತ್ತೆ ಉಕ್ಕಿ ಹರಿಯುತ್ತಿದ್ದು, ತನ್ನ ಪ್ರತಾಪ ತೋರುತ್ತಿದೆ. ಈ ಹಿನ್ನಲೆ ನೀರಿನಲ್ಲಿಯೇ ನಿಂತು ಡಿಸಿಎಂ ಕಾರಜೋಳ ಸೇರಿದಂತೆ ಇತರ ಅಧಿಕಾರಿಗಳಿಗೆ ಪತ್ರವನ್ನು ಓದುವ ಮೂಲಕ ಬಾಲಕಿಯೊಬ್ಬಳು ತರಾಟೆಗೆ ತೆಗೆದುಕೊಂಡಿದ್ದಾಳೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿ ಪಟ್ಟಣದ ಅನ್ನಪೂರ್ಣ ಮಠದ ಎಂಬ ಬಾಲಕಿ ತಮ್ಮ ಊರಿನಲ್ಲಿ ಉಂಟಾದ ಪ್ರವಾಹ ಸಮಸ್ಯೆ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಕಣ್ತೆರೆದು ನೋಡುವಂತೆ ಆಗ್ರಹ ಮಾಡಿದ್ದಾಳೆ. ಪ್ರವಾಹದ ನೀರಲ್ಲಿ ನಿಂತು ಪತ್ರ ಓದಿ ಗಮನ ಸೆಳೆದ ಬಾಲಕಿ , ಪತ್ರದ ಮೂಲಕ ಡಿಸಿಎಂ ಗೋವಿಂದ ಕಾರಜೋಳಗೆ ಸವಾಲು ಹಾಕಿದ್ದಾಳೆ.
ನಮ್ಮ ಗ್ರಾಮದ ಎಲ್ಲ ರಸ್ತೆಗಳು ಜಲಾವೃತವಾಗಿವೆ. ಕಳೆದ ಮೂರು ದಿನದಿಂದ ಘಟಪ್ರಭಾ ನದಿ ನೀರು ಹರಿದು ಬರುತ್ತಿದೆ. ಆದರೆ, ಯಾರೂ ಕೂಡ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ನೀವು ನಿಜವಾಗಲೂ ಜನಸೇವೆ ಮಾಡಲು ಪ್ರಮಾಣ ಮಾಡಿದ್ದರೆ, ಒಂದು ರಸ್ತೆ ಕೂಡ ಮಾಡದಿದ್ದರೆ, ನೀವ್ಯಾಕೆ ಜನಪ್ರತಿನಿಧಿಗಳಾಗಬೇಕು ಎಂದು ಬಾಲಕಿ ಡಿಸಿಎಂ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದಾಳೆ.
ಸದ್ಯ ಪತ್ರದ ಮೂಲಕ ಅಧಿಕಾರಿಗಳು ಹಾಗೂ ಡಿಸಿಎಂ ಅವರಿಗೆ ತರಾಟೆಗೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನಾದರೂ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಬಾಲಕಿಯ ಕೂಗಿಗೆ ಓಗೊಟ್ಟು ಸಮಸ್ಯೆ ಬಗೆಹರಿಸುತ್ತಾರಾ ಅಂತ ಕಾದು ನೋಡಬೇಕಿದೆ.