ಬಾಗಲಕೋಟೆ: ಘಟಪ್ರಭಾ ನದಿ ಪ್ರವಾಹದಿಂದಾಗಿ ಸಂತ್ರಸ್ತ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಅಂತ್ಯಸಂಸ್ಕಾರ ಮುಗಿಸಿ ಮರಳಿ ಮನೆ ಸೇರುವಷ್ಟರಲ್ಲೇ ಪ್ರವಾಹ ಸಂಭವಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದಲ್ಲಿ ನಡೆದಿದೆ.
ಐದು ದಿನಗಳ ಹಿಂದೆ ಗರ್ಭಿಣಿಯೊಬ್ಬರು ಮೃತ ಪಟ್ಟಿದ್ದರು. ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿ ಮನೆ ಸೇರುವಷ್ಟರಲ್ಲೇ ಮನೆಗೆ ನೀರು ನುಗ್ಗಿದ್ದು, ಮರು ದಿನದ ಕಾರ್ಯ ನೆರವೇರಿಸಲಾಗದೇ ಕಾಳಜಿ ಕೇಂದ್ರದಲ್ಲಿ ಮೃತಳ ಕುಟುಂಬಸ್ಥರು ಆಶ್ರಯ ಪಡೆದುಕೊಂಡಿದ್ದಾರೆ.
ಹೆರಿಗೆ ನೋವು ತಾಳದೇ ಲಕ್ಷ್ಮಿ ಕವಳ್ಳಿ (22) ಮೃತಪಟ್ಟಿದ್ದರು. ಇವರ ಅಂತ್ಯಸಂಸ್ಕಾರ ನೆರವೇರಿಸಿ ಬರುವಾಗ ಮೃತಳ ಕುಟುಂಬಸ್ಥರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಂದೆ, ತಾಯಿ, ಸಹೋದರ, ಒಬ್ಬ ಮಗ ಸೇರಿದಂತೆ ಒಟ್ಟು 9 ಮಂದಿ ಮಿರ್ಜಿ ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಮನೆ ಸಂಪೂರ್ಣ ಜಲಾವೃತವಾಗಿರುವ ಪರಿಣಾಮ ಗಂಜಿ ಕೇಂದ್ರದಲ್ಲಿ ಕುಟುಂಬದವರು ಕಣ್ಣೀರು ಹಾಕುತ್ತಿದ್ದಾರೆ.
ಇನ್ನು ಕಾಳಜಿ ಕೇಂದ್ರಕ್ಕೆ ಬಂಧು-ಬಳಗದವರು ಆಗಮಿಸಿ ಸಾಂತ್ವನ ಹೇಳುತ್ತಿದ್ದಾರೆ. ಸದ್ಯ ಕಾಳಜಿ ಕೇಂದ್ರಕ್ಕೂ ಪ್ರವಾಹದ ಭೀತಿ ಎದುರಾಗಿದ್ದು, ಬೇರೆಡೆಗೆ ಕಾಳಜಿ ಕೇಂದ್ರವನ್ನು ತಾಲೂಕು ಆಡಳಿತ ಸ್ಥಳಾಂತರ ಮಾಡುತ್ತಿದೆ.