ಲಕ್ನೋ: ಉತ್ತರ ಪ್ರದೇಶ ಸರ್ಕಾರವು 2023-24ನೇ ಸಾಲಿನ ಖೇಲೋ ಇಂಡಿಯಾ ಕ್ರೀಡಾಕೂಟವನ್ನು ರಾಜ್ಯದ ನಾಲ್ಕು ಪ್ರಮುಖ ನಗರಗಳಲ್ಲಿ ಆಯೋಜಿಸಲಿದೆ. ರೋಯಿಂಗ್, ಬಾಸ್ಕೆಟ್ ಬಾಲ್, ಜುಡೋ, ಕಬಡ್ಡಿ, ಕುಸ್ತಿ, ಈಜು ಹಾಗು ಬಾಕ್ಸಿಂಗ್ ಸೇರಿದಂತೆ ಒಟ್ಟು 20 ವಿಭಾಗಗಳಲ್ಲಿ ದೇಶದ 150 ವಿಶ್ವವಿದ್ಯಾಲಯದಿಂದ ಸುಮಾರು 4,500 ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ ಎಂದು ಕ್ರೀಡಾ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಲ್ ಹೇಳಿದ್ದಾರೆ.
ಕರ್ನಾಟಕ ಮತ್ತು ಒಡಿಶಾ ನಂತರ ಮೊದಲ ಬಾರಿಗೆ ಉತ್ತರ ಪ್ರದೇಶಕ್ಕೆ ಕ್ರೀಡಾಕೂಟವನ್ನು ಆಯೋಜಿಸುವ ಅವಕಾಶ ದೊರಕಿದೆ. ಈ ಕುರಿತು ಸರ್ಕಾರಿ ಅಧಿಕಾರಿಗಳು ಮತ್ತು ಖೇಲೋ ಇಂಡಿಯಾ ಪ್ರತಿನಿಧಿಗಳು ನಡೆಸಿದ ಸಭೆಯಲ್ಲಿ ನೋಯ್ಡಾದಲ್ಲಿ ಕಬಡ್ಡಿ, ಜುಡೋ, ಬಿಲ್ಲುಗಾರಿಕೆ, ಫೆನ್ಸಿಂಗ್ ಆಟಗಳನ್ನು ಆಯೋಜಿಸಲಾಗಿವುದು. ಗೋರಖ್ಪುರ್ನಲ್ಲಿ ರೋಯಿಂಗ್ ಮೀಸಲಿಡಲಾಗಿದೆ. ಕುಸ್ತಿ, ಮಾಲ್ಕಾಮ್ ಮತ್ತು ಯೋಗ ಸ್ಪರ್ಧೆಗಳು ವಾರಣಾಸಿಯಲ್ಲಿ ನಡೆಯಲಿವೆ. ಇನ್ನುಳಿದ ಕಾರ್ಯಕ್ರಮಗಳು ಲಕ್ನೋನಲ್ಲಿ ನಡೆಸಲು ನಿರ್ಧರಿಸಲಾಗಿದೆ.
ರಾಷ್ಟ್ರೀಯ ಕ್ರೀಡಾಕೂಟದಲ್ಲಿ 26 ವರ್ಷ ಒಳಗಿನ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಮಹಿಳಾ ಆಟಗಾರರ ಮೇಲೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ಉತ್ತಮ ಗುಣಮಟ್ಟದ ಸೌಕರ್ಯವನ್ನು ನೀಡಲಾಗುವುದು ಎಂದು ಸೆಹಗಲ್ ವಿವರ ನೀಡಿದರು. 2021ರ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ ಬೆಂಗಳೂರಿನಲ್ಲಿ ನಡೆದಿತ್ತು.
ಇದನ್ನೂ ಓದಿ: ಇಂದು ಅಡಿಲೇಡ್ನಲ್ಲಿ ಭಾರತ - ಆಂಗ್ಲರ ಮಧ್ಯೆ ಕಾದಾಟ.. ಗೆದ್ದವರಿಗೆ ಫೈನಲ್ ಟಿಕೆಟ್