ಬ್ಯಾಂಕಾಕ್: ಏಷ್ಯನ್ ಕಪ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಮನಿಕಾ ಬಾತ್ರಾ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇವರು ಟೂರ್ನಿಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ.
ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಅವರ ಕನಸಿನ ಓಟ ಶನಿವಾರ ಇಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಂತ್ಯಗೊಂಡಿದೆ. ಜಪಾನ್‌ನ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಮಿಮಾ ಇಟೊ ಎದುರು ಸೋಲು ಕಂಡಿದ್ದಾರೆ. ಶ್ರೇಯಾಂಕ ರಹಿತ ಮನಿಕಾ ಈ ಕಾಂಟಿನೆಂಟಲ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದಾರೆ. ಅವರು ವಿಶ್ವದ ಐದನೇ ಶ್ರೇಯಾಂಕದ ಟೇಬಲ್ ಟೆನಿಸ್ ಆಟಗಾರ್ತಿಯಿಂದ 8-11, 11-7, 7-11, 6-11, 11-8, 7-11, (2-4) ಸೋಲು ಅನುಭವಿಸಿದರು.
ವಿಶ್ವದ ಶ್ರೇಣಿನಲ್ಲಿ 44ನೇ ಸ್ಥಾನದಲ್ಲಿರುವ ಮನಿಕಾ ಕ್ವಾರ್ಟರ್‌ಫೈನಲ್‌ನಲ್ಲಿ ಉತ್ತಮ ಶ್ರೇಯಾಂಕಿತೆ ಚೈನೀಸ್ ತೈಪೆಯ ಚೆನ್ ಸು ಯು ಅವರನ್ನು 4-3 ಅಂತರದಿಂದ ಸೋಲಿಸಿ ಗಮನ ಸೆಳೆದಿದ್ದರು. ಏಷ್ಯನ್ ಕಪ್‌ನ 39 ವರ್ಷಗಳ ಇತಿಹಾಸದಲ್ಲಿ, ಮನಿಕಾ ಭಾರತೀಯರಲ್ಲಿ ಅತ್ಯುತ್ತಮ ಪ್ರದರ್ಶನದ ದಾಖಲೆ ಬರೆದಿದ್ದಾರೆ. ಈ ಹಿಂದೆ 2015ರಲ್ಲಿ ಅಚಂತ ಶರತ್ ಕಮಲ್ ಮತ್ತು 2019ರಲ್ಲಿ ಜಿ ಸತ್ಯನ್ ಆರನೇ ಸ್ಥಾನದಲ್ಲಿದ್ದರು.
ಏಷ್ಯ ಖಂಡದ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಅಗ್ರ 16 ಆಟಗಾರರು ಈ 2,00,000 ಡಾಲರ್ ಬಹುಮಾನ ಸ್ಪರ್ಧೆಯಲ್ಲಿ ವಿಶ್ವ ಶ್ರೇಯಾಂಕ ಮತ್ತು ಅರ್ಹತೆಯ ಆಧಾರದ ಮೇಲೆ ಭಾಗವಹಿಸಿದ್ದಾರೆ.
ಇದನ್ನೂ ಓದಿ:NZ vs IND T20I: ನ್ಯೂಜಿಲೆಂಡ್-ಭಾರತ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದು