ಯಾಂಕ್ಟನ್ (ಅಮೆರಿಕ): ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಜ್ಯೋತಿ ಸುರೇಖಾ ವೆನ್ನಮ್ ಬೆಳ್ಳಿ ಪದಕ ಪಡೆದಿದ್ದಾರೆ. ಭಾರತದ ಜ್ಯೋತಿ ಮತ್ತು ಕೊಲಂಬಿಯಾದ ಸಾರಾ ಲೋಪೆಜ್ ನಡುವೆ ಜಿದ್ದಾಜಿದ್ದಿ ನಡೆದಿತ್ತು.
ಶನಿವಾರ ತಡರಾತ್ರಿ ನಡೆದ ಮಹಿಳೆಯರ ವೈಯಕ್ತಿಕ ಕಂಪೌಂಡ್ ವಿಭಾಗದ ಫೈನಲ್ ಸೆಣಸಾಟದಲ್ಲಿ ಕೊಲಂಬಿಯಾದ ಆರ್ಚರ್ 146 ಅಂಕ ಪಡೆದಿದ್ದರು. ಇನ್ನು ಜ್ಯೋತಿ 144 ಪಡೆದು ಕೇವಲ 2 ಅಂಕಗಳ ಅಂತರದಲ್ಲಿ ಸೋಲು ಕಂಡರು.
ಇನ್ನು ಪುರುಷರ ವೈಯಕ್ತಿಕ ಕಂಪೌಂಡ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೂರು ಬಾರಿಯ ವಿಶ್ವಕಪ್ ವಿಜೇತ ಅಭಿಷೇಕ್ ವರ್ಮಾ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುಂಡಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ನೆದರ್ಲೆಂಡ್ಸ್‌ನ ಮೈಕ್ ಶೋಲೆಸರ್ ಎದುರು ಕೇವಲ ಒಂದು ಪಾಯಿಂಟ್ ಅಂತರದಿಂದ (147–148) ಮುಗ್ಗರಿಸಿದರು.
ಭಾರತದ ಆರ್ಚರಿ ಪಟುಗಳು ಚಾಂಪಿಯನ್‌ಷಿಪ್‌ನ ಕಂಪೌಂಡ್ ವಿಭಾಗದಲ್ಲಿ ಒಟ್ಟು ಮೂರು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಶುಕ್ರವಾರ ಮಹಿಳಾ ಮತ್ತು ಮಿಶ್ರ ವಿಭಾಗದ ತಂಡಗಳು ಕೊಲಂಬಿಯಾ ಎದುರು ಮಣಿದು ಎರಡನೇ ಸ್ಥಾನ ಗಳಿಸಿದ್ದವು. ಎರಡೂ ತಂಡಗಳಲ್ಲಿ ಜ್ಯೋತಿ ಸ್ಪರ್ಧಿಸಿದ್ದರು.
ಜ್ಯೋತಿ ಅವರು ನೆದರ್ಲೆಂಡ್ಸ್‌ನ ಡೆನ್ ಬಾಶ್‌ನಲ್ಲಿ ನಡೆದಿದ್ದ 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.