ಟೋಕಿಯೋ : ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ರಾಣಿ ರಾಂಪಾಲ್ ನೇತೃತ್ವದ ಭಾರತ ಮಹಿಳಾ ಹಾಕಿ ತಂಡವು 4-3 ಅಂತರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಹಾದಿ ಮತ್ತಷ್ಟು ಸುಗಮವಾಗಿಸಿಕೊಂಡಿದೆ. ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ವಂದನಾ ಕಟಾರಿಯಾ ಬಾರಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ತಂಡವು ಭರ್ಜರಿ ಜಯ ಸಾಧಿಸಿತು.
'ಎ' ಗುಂಪಿನ ಪಂದ್ಯದಲ್ಲಿ ಮೊದಲಿಗೆ ಹ್ಯಾಟ್ರಿಕ್ ಸೋಲು ಅನುಭವಿಸಿದ್ದ ಭಾರತೀಯ ಮಹಿಳಾ ಹಾಕಿ ತಂಡ, ಆ ಬಳಿಕ ಸತತ ಎರಡು ಪಂದ್ಯಗಳನ್ನು ಜಯಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಇಂದು ರಾತ್ರಿ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವು ಐರ್ಲೆಂಡ್ ತಂಡವನ್ನು ಮಣಿಸಿದರೆ ಅಥವಾ ಈ ಪಂದ್ಯ ಡ್ರಾನಲ್ಲಿ ಅಂತ್ಯವಾದರೆ ಭಾರತ ವನಿತೆಯರು ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಡಲಿದ್ದಾರೆ.
ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಮಹಿಳಾ ಹಾಕಿ ತಂಡವು ಮೊದಲ ಬಾರಿಗೆ ನಾಕೌಟ್ ಪ್ರವೇಶಿಸಿದ ಸಾಧನೆ ಮಾಡಲಿದೆ. ಒಂದು ವೇಳೆ ಗ್ರೇಟ್ ಬ್ರಿಟನ್ ಎದುರು ಐರ್ಲೆಂಡ್ ಗೆಲುವು ಸಾಧಿಸಿದರೆ ಭಾರತ ಮಹಿಳಾ ಹಾಕಿ ತಂಡದ ಟೋಕಿಯೋ ಒಲಿಂಪಿಕ್ಸ್ ಪಯಣ ಅಂತ್ಯವಾಗಲಿದೆ.