ಲೌಸೇನ್(ಸ್ವಿಟ್ಜರ್ಲೆಂಡ್) : ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದಾಗಿ ಫುಟ್ಬಾಲ್ ವಿಶ್ವ ಆಡಳಿತ ಮಂಡಳಿ ಫಿಫಾ, ಪಾಕಿಸ್ತಾನ ಫುಟ್ಬಾಲ್ ಫೆಡರೇಶನ್ (ಪಿಎಫ್ಎಫ್)ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತು ಮಾಡಿದೆ. ಇದೇ ಕಾರಣದಿಂದಾಗಿ ಚಾಡಿಯನ್ ಫುಟ್ಬಾಲ್ ಸಂಸ್ಥೆಯನ್ನು (ಎಫ್‌ಟಿಎಫ್‌ಎ)ನಿಷೇಧಿಸಿದೆ.
ಲಾಹೋರ್ನ ಪಿಎಫ್ಎಫ್ ಕೇಂದ್ರ ಕಚೇರಿಯನ್ನು ಸ್ವಾದೀನ ಪಡಿಸಿಕೊಂಡಿರುವುದು ಈ ಅಮಾನತಿಗೆ ಕಾರಣವಾಗಿದೆ. ಫಿಫಾ, ಹರೂನ್ ಮಲಿಕ್ ನೇತೃತ್ವದಲ್ಲಿ ನೇಮಿಸಿದ್ದ ಸಾಮಾನ್ಯೀಕರಣ ಸಮಿತಿಯನ್ನು ಪ್ರತಿಭಟನಾಕಾರರ ಗುಂಪು ತೆಗೆದು ಹಾಕಿ, ಪಿಎಫ್‌ಎಫ್‌ನ ಮುಂದಾಳತ್ವವನ್ನು ಸೈಯದ್ ಅಶ್ಫಾಕ್ ಹುಸೇನ್ ಷಾ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ಫಿಫಾ ತನ್ನ ವೆಬ್ಸೈಟ್ನಲ್ಲಿ ಪಾಕಿಸ್ತಾನದ ಅಮಾನತಿನ ಬಗ್ಗೆ ಬರೆದು ಕೊಂಡಿದೆ.
ಮಾರ್ಚ್ 27ರಂದು ಪಿಎಫ್‌ಎಫ್ ಕಚೇರಿಯ ಮೇಲೆ ದಾಳಿ ನಡೆದಿತ್ತು. ಅಲ್ಲಿದ್ದ ಜನರನ್ನು ಪಿಎಫ್ಎಫ್ ಮಾಜಿ ಅಧ್ಯಕ್ಷ ಸೈಯದ್ ಅಶ್ಫಾಕ್ ಹುಸೇನ್ ಷಾ ಮತ್ತು ಅವರ ಗುಂಪು ಒತ್ತೆಯಾಳುಗಳನ್ನಾಗಿ ಹಿಡಿದಿಟ್ಟು ಕೊಂಡಿದ್ದರೆಂದು ತಿಳಿದು ಬಂದಿದೆ.
ಪಿಎಫ್ಎಫ್ ಅಮಾನತು ನಿರ್ಧಾರ ಕೈಗೊಳ್ಳುವ ಮುನ್ನ ಫಿಫಾ ಎಚ್ಚರಿಕೆ ಪತ್ರ ಹೊರಡಿಸಲಾಗಿತ್ತು ಎಂದು ವಿಶ್ವ ಆಡಳಿತ ಮಂಡಳಿ ತಿಳಿಸಿದೆ. ಅಲ್ಲದೆ ಪಿಎಫ್‌ಎಫ್‌ನ ಸಾಮಾನ್ಯೀಕರಣ ಸಮಿತಿ, ಫಿಎಫ್ಎಫ್ನ ಆಡಳಿತ, ಬ್ಯಾಂಕಿಂಗ್ ಖಾತೆಗಳ ವ್ಯವಹಾರ ಮತ್ತು ಕಮ್ಯುನಿಕೇಷನ್ ಚಾನಲ್ಸ್ಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದು ಕೊಂಡಿದೆ ಎಂದು ದೃಢೀಕರಣಗೊಂಡರೆ ಮಾತ್ರ ಅಮಾನತನ್ನು ಹಿಂದಕ್ಕೆ ತೆಗೆದುಕೊಳ್ಳಲಾಗುವುದು ಎಂದು ಫಿಫಾ ತಿಳಿಸಿದೆ.