ಕೊಚ್ಚಿ: ದೇಶದಲ್ಲಿ ಮೊದಲ ಕೊರೊನಾ ವೈರಸ್ ಸೋಂಕು ತಗುಲಿ ಹೆಚ್ಚು ಪರಿಣಾಮ ಎದುರಿಸಿದ್ದ ಕೇರಳ ರಾಜ್ಯ ಸರ್ಕಾರ ಕೊರೊನಾವನ್ನು ಹಿಮ್ಮೆಟ್ಟಿಸಿದ ಕಾರ್ಯವನ್ನು ವಿದೇಶಿ ಫುಟ್ಬಾಲ್ ಕೋಚ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಲ್ಗೇರಿಯಾದ ಡಿಮಿಟರ್ ಪಂತೇವ್, ಮಾರ್ಚ್ 4ರಂದು ಪಲಕ್ಕಾಡ್ಗೆ ತೆರಳಿದ್ದ ವೇಳೆ ಪಟ್ಟಾಂಬಿಯಲ್ಲಿ ಅನಿವಾರ್ಯವಾಗಿ ಕ್ವಾರಂಟೈನಲ್ಲಿರುವಂತಾಗಿತ್ತು. ಇವರು ದುಬೈ ಮೂಲದ ಹೆಚ್16 ಸ್ಫೋರ್ಟ್ಸ್ ಸರ್ವೀಸ್ ಸಂಸ್ಥೆಯ ಕೋರಿಕೆ ಮೇರೆಗೆ ವೃತ್ತಿಪರ ತರಬೇತಿ ಕೇಂದ್ರ ಸ್ಥಾಪಿಸಲು ಅಧ್ಯಯನ ನಡೆಸುವ ಸಲುವಾಗಿ ತೆರಳಿದ್ದ ವೇಳೆ ನಿರ್ಬಂಧಿತರಾಗಿದ್ದರು. "ಯುರೋಪಿನಲ್ಲಿ ವೈರಸ್ ಹರಡುತ್ತಿರುವುದು ಹಾಗೂ ಅಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಕೇಳಿದರೆ ಈಗಲು ನಾನು ಮೂಕನಾಗುತ್ತೇನೆ. ಆದರೆ, ವೈರಸ್ ಹರಡುವ ವೇಳೆ ನಾನು ಇದ್ದಂತಹ ಕೇರಳ ರಾಜ್ಯವನ್ನು ಮಾತ್ರ ನಾನು ಸ್ಮರಿಸಿಕೊಳ್ಳುತ್ತೇನೆ ಮತ್ತು ಆ ರಾಜ್ಯಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಡಿಮಿಟರ್ ಹೇಳಿದ್ದಾರೆ.
ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ವೈರಸ್ ಹರಡದಂತೆ ತಡೆಯಲು ನಾಯಕತ್ವವಹಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಆರೋಗ್ಯ ಸಚಿವೆ ಕೆಕೆ ಶೈಲಜಾ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಾವುದೇ ಸಮಯದಲ್ಲಿ ನಾನೂ ಮನೆಗೆ ಹೋಗಬೇಕೆಂದು ಚಿಂತಿಗೇಡಾಗಲಿಲ್ಲ. ಗೌರವಾನ್ವಿತ ಮುಖ್ಯಮಂತ್ರಿಗಳು ಪರಿಸ್ಥಿತಿಯ ಉಸ್ತುವಾರಿವಹಿಸಿಕೊಂಡರು. ಆರೋಗ್ಯ ಸಚಿವೆ ಶೈಲಜಾ ಟೀಚರ್ ಅವರ ಜೊತೆ ರಾಜ್ಯದಲ್ಲಿನ ವಿಪತ್ತು ನಿರ್ವಹಣೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಇದಕ್ಕೆ ನಾನು ಕೂಡ ಸಾಕ್ಷಿಯಾಗಿದ್ದೇನೆ. ಈ ಭೀಕರ ಕಾಯಿಲೆಯ ವಿರುದ್ಧದ ಹೋರಾಟದಲ್ಲಿ ಅವರ ಬದ್ಧತೆ ಹಾಗೂ ಕಠಿಣ ಪರಿಶ್ರಮಕ್ಕಾಗಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆಯುತ್ತಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ.
ಇದರ ಜೊತೆಗೆ ಸ್ವತಃ ತಮ್ಮ ಆರೋಗ್ಯವನ್ನು ದಿನನಿತ್ಯ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದ ಸ್ಥಳೀಯ ಆರೋಗ್ಯಾಧಿಕಾರಿ, ಪೊಲೀಸ್ ಅಧಿಕಾರಿಗಳಿಗೂ ಧನ್ಯವಾದ ತಿಳಿಸಿರುವ ಡಿಮಿಟರ್ ಒಮ್ಮೆ ಸಿಎಂ ಹಾಗೂ ಆರೋಗ್ಯ ಸಚಿವರನ್ನು ನೇರವಾಗಿ ಭೇಟಿ ಮಾಡಿ ಧನ್ಯವಾದ ತಿಳಿಸಬೇಕು ಎಂದು ಅಭಿಲಾಷೆ ವ್ಯಕ್ತಪಡಿಸಿದ್ದಾರೆ.