ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವಾಗ ಕ್ರಿಕೆಟರ್ಸ್ ವಿಶ್ರಾಂತಿ ಪಡೆದುಕೊಳ್ಳುವುದಿಲ್ಲ. ಆದರೆ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವಾಗ ಮಾತ್ರ ವಿರಾಮ ಪಡೆದುಕೊಳ್ಳುತ್ತಾರೆ. ಈ ನಿಯಮವನ್ನ ನಾನು ಒಪ್ಪುವುದಿಲ್ಲ ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಪ್ರಶ್ನೆ ಮಾಡಿದ್ದಾರೆ. ಇದರ ಜೊತೆಗೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕುರಿತು ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿ ಮುಗಿಯುತ್ತಿದ್ದಂತೆ ಟೀಂ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ನಡುವೆ ಏಕದಿನ ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಈ ವಿಚಾರವನ್ನಿಟ್ಟುಕೊಂಡು ಗವಾಸ್ಕರ್ ಮಾತನಾಡಿದ್ದಾರೆ.
ಆಟಗಾರರು ವಿಶ್ರಾಂತಿ ಪಡೆದುಕೊಳ್ಳುವ ಪರಿಕಲ್ಪನೆ ನಾನು ಒಪ್ಪಿಕೊಳ್ಳುವುದಿಲ್ಲ. ಐಪಿಎಲ್ ಸಮಯದಲ್ಲಿ ಯಾವುದೇ ಪ್ಲೇಯರ್ ವಿಶ್ರಾಂತಿ ಪಡೆದುಕೊಳ್ಳುವುದಿಲ್ಲ. ಆದರೆ, ಭಾರತಕ್ಕಾಗಿ ಆಡುವಾಗ ಮಾತ್ರ ವಿಶ್ರಾಂತಿ ಕೇಳುತ್ತೀರಿ. ಭಾರತಕ್ಕಾಗಿ ಆಟವಾಡಿ. ವಿಶ್ರಾಂತಿ ಬಗ್ಗೆ ಮಾತನಾಡಬೇಡಿ ಎಂದು ಗವಾಸ್ಕರ್ ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿರಿ: India vs England ODI: ಮೊದಲ ಏಕದಿನ ಪಂದ್ಯದಿಂದ ವಿರಾಟ್ ಕೊಹ್ಲಿ ಔಟ್?
ಟಿ-20 ಕ್ರಿಕೆಟ್ನಲ್ಲಿ ಕೇವಲ 20 ಓವರ್ಗಳಿವೆ. ಅದು ನಿಮ್ಮ ದೇಹಕ್ಕೆ ಯಾವುದೇ ಒತ್ತಡ ಇರಲ್ಲ. ಟೆಸ್ಟ್, ಏಕದಿನ ಪಂದ್ಯಗಳನ್ನಾಡುವಾಗ ವಿಶ್ರಾಂತಿ ಪಡೆದುಕೊಳ್ಳಿ ಎಂದಿರುವ ಅವರು, ವಿಶ್ರಾಂತಿ ಪರಿಕಲ್ಪನೆ ಬಗ್ಗೆ ಬಿಸಿಸಿಐ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಕ್ರಿಕೆಟ್ ಹೆಚ್ಚು ವೃತ್ತಿಪರವಾಗಬೇಕಾದರೆ, ವಿಶ್ರಾಂತಿ ಪಡೆದುಕೊಳ್ಳುವುದನ್ನ ಕಡಿಮೆ ಮಾಡಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.
![ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತ ಸುನಿಲ್ ಗವಾಸ್ಕರ್](https://etvbharatimages.akamaized.net/etvbharat/prod-images/15803575_twdfdfd.jpg)
ಕೊಹ್ಲಿ ಬೆಂಬಲಕ್ಕೆ ನಿಂತ ಗವಾಸ್ಕರ್: ಭಾರತ ತಂಡದಲ್ಲಿ ರೋಹಿತ್ ಶರ್ಮಾ ರನ್ಗಳಿಕೆ ಮಾಡದೇ ಇದ್ದಾಗ ಯಾರೂ ಕೂಡ ಮಾತನಾಡುವುದಿಲ್ಲ. ಆದರೆ , ಇದೀಗ ಕೊಹ್ಲಿ ಬಗ್ಗೆ ಎಲ್ಲರೂ ಮಾತನಾಡುವಂತಾಗಿದೆ. ಫಾರ್ಮ್ ಎಂಬುದು ತಾತ್ಕಾಲಿಕ. ಅವರು ಆಡುವ ಶೈಲಿ ಮಾತ್ರ ಶಾಶ್ವತವಾಗಿರುತ್ತದೆ.
ಖಂಡಿತವಾಗಿ ಕೊಹ್ಲಿ ಫಾರ್ಮ್ಗೆ ಕಮ್ಬ್ಯಾಕ್ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಹಾಗೂ ಟಿ -20 ಸರಣಿಯಲ್ಲಿ ಕಳಪೆ ಫಾರ್ಮ್ನಲ್ಲಿರುವ ವಿರಾಟ್ ಬಗ್ಗೆ ಅನೇಕರು ಟೀಕೆ ವ್ಯಕ್ತಪಡಿಸಿದ್ದಾರೆ.