ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿ ಐತಿಹಾಸಿಕ ಸರಣಿ ಗೆಲ್ಲಿಸಿಕೊಟ್ಟಿದ್ದ ಅಜಿಂಕ್ಯ ರಹಾನೆ, ಭಾರತ ತಂಡದ ಅಡಿಲೇಡ್ನಲ್ಲಿ 36ಕ್ಕೆ ಆಲೌಟ್ ಆದ ನಂತರ ನಾನು ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಆ ಸರಣಿಯಲ್ಲಿ ನಮಗೆ ಯಶಸ್ಸು ಸಿಕ್ಕಿತ್ತು, ಆದರೆ, ಆ ಕ್ರೆಡಿಟ್ ಬೇರೆಯವರು ತೆಗೆದುಕೊಂಡಿದ್ದಾರೆ" ಎಂದು ಹೆಸರೇಳದೇ ಮಾಜಿ ಕೋಚ್ ರವಿಶಾಸ್ತ್ರಿಯ ವಿರುದ್ಧ ಟೀಕೆಗಳ ಸುರಿಮಳೆಗೆರೆದಿದ್ದಾರೆ.
ಅಡಿಲೇಡ್ನಲ್ಲಿ ನಡೆದ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 36 ರನ್ಗಳಿಗೆ ಆಲೌಟ್ ಆಗುವ ಮೂಲಕ ಭಾರಿ ಅಪಮಾನಕರ ಸೋಲು ಕಂಡಿತ್ತು. ಇದರ ಬೆನ್ನಲ್ಲೇ ನಾಯಕ ಕೊಹ್ಲಿ ವೈಯಕ್ತಿಕ ಕಾರಣದಿಂದ ಆಸ್ಟ್ರೇಲಿಯಾ ತೊರೆದು ಭಾರತಕ್ಕೆ ವಾಪಾಸ್ ಆಗಿದ್ದರು.
ಈ ಕಠಿಣ ಸಂದರ್ಭದಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ರಹಾನೆ ಮೆಲ್ಬೋರ್ನ್ ಮತ್ತು ಗಬ್ಬಾದಲ್ಲಿ ಐತಿಹಾಸಿಕ ವಿಜಯದೊಂದಿಗೆ 2-1ರಲ್ಲಿ ಟೆಸ್ಟ್ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ರಹಾನೆ ಎಂಸಿಜಿಯಲ್ಲಿ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಸರಣಿಯನ್ನು 1-1ರಲ್ಲಿ ಸಮಬಲ ಮಾಡುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.
"ನಾನು ಅಲ್ಲಿ(ಆಸ್ಟ್ರೇಲಿಯಾ) ಏನು ಮಾಡಿದ್ದೇನೆ ಎನ್ನುವುದರ ಬಗ್ಗೆ ನನಗೆ ಅರಿವಿದೆ. ನನಗೆ ಅದನ್ನು ಯಾರೊಬ್ಬರಿಗೂ ಮುಂದೆ ಹೇಳುವ ಅಗತ್ಯವಿಲ್ಲ ಮತ್ತು ಅದರ ಶ್ರೇಯಸನ್ನು ಕೇಳಿ ಪಡೆಯುವ ವ್ಯಕ್ತಿಯೂ ನಾನಲ್ಲ. ಹೌದು, ಮೈದಾನದಲ್ಲಿ ಮತ್ತು ಡ್ರೆಸಿಂಗ್ ರೂಮ್ನಲ್ಲಿ ಕೆಲವು ವಿಷಯಗಳಲ್ಲಿ ನಾನು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದೆ.
ಆದರೆ, ಅದರಿಂದ ಸಿಕ್ಕ ಯಶಸ್ಸಿನ ಕ್ರೆಡಿಟ್ಅನ್ನು ಬೇರೆಯವರು ತೆಗೆದುಕೊಂಡಿದ್ದಾರೆ. ಆದರೆ ನನಗೆ ಸರಣಿ ಗೆಲ್ಲುವುದಷ್ಟೇ ಮುಖ್ಯವಾಗಿತ್ತು. ನನಗೆ ಅದೊಂದು ಐತಿಹಾಸಿಕ ಸರಣಿಯಾಗಿದೆ ಮತ್ತು ಅದು ತುಂಬಾ ವಿಶೇಷವಾದದ್ದು" ಎಂದು ಬ್ಯಾಕ್ಸ್ಟೇಜ್ ವಿತ್ ಬೊರಿಯಾ ಯುಟ್ಯೂಬ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಭಾರತದವನಾಗಿದ್ದರೆ ನನಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗುತ್ತಿರಲಿಲ್ಲವೇನೋ: ಎಬಿ ಡಿ ವಿಲಿಯರ್ಸ್
ರಹಾನೆ ತಮ್ಮೊಳಗೆ ಇರುವ ಹತಾಶೆಯನ್ನು ಹೆಸರೇಳದೆ ಅಂದಿನ ಕೋಚ್ ರವಿಶಾಸ್ತ್ರಿಯವರ ಮೇಲೆ ಅಸಮಾಧಾನ ಹೊರಹಾಕಿರುವುದು ಸ್ಪಷ್ಟವಾಗಿತ್ತು. ಏಕೆಂದರೆ ಆ ಸರಣಿಯಲ್ಲಿ ತಂಡದ ಪ್ರದರ್ಶನವನ್ನೂ ಮೀರಿ ರವಿಶಾಸ್ತ್ರಿ ಮಾಧ್ಯಮಗಳಲ್ಲಿ ವ್ಯಾಪಕವಾದ ಮೆಚ್ಚುಗೆ ಪಡೆದಿದ್ದರು. ತಂಡದ 2 ಜಯಗಳಲ್ಲೂ ರವಿಶಾಸ್ತ್ರಿ ಜಯದ ಸೂತ್ರದಾರ ಎಂಬಂತೆ ವಿಜೃಂಭಿಸಲಾಗಿತ್ತು.
ಆ ಸರಣಿಯ ನಂತರ ಶ್ರೇಯಸ್ಸನ್ನು ತೆಗೆದುಕೊಂಡ ಜನರು ಮಾಧ್ಯಮದ ಮುಂದೆ ನಾನು ಇದನ್ನು ಮಾಡಿದೆ, ಇದು ನನ್ನ ನಿರ್ಧಾರವಾಗಿತ್ತು ಅಥವಾ ಇದು ನನ್ನ ಕರೆಯಾಗಿತ್ತು ಎಂದು ಹೇಳಿಕೊಂಡರು, ಆದರೆ, ನಾನು ಮೈದಾನದಲ್ಲಿ ತೆಗೆದುಕೊಂಡ ನಿರ್ಧಾರಗಳು ಏನು ಎಂಬುದು ನನಗೆ ಗೊತ್ತಿದೆ. ಮ್ಯಾನೇಜ್ಮೆಂಟ್ ಜೊತೆಗೂ ನಾವು ಮಾತನಾಡಿದ್ದೇವೆ. ಆದರೆ ನಾನು ನನ್ನ ಬಗ್ಗೆ ಹೆಚ್ಚು ಹೇಳಿಕೊಳ್ಳುವುದಿಲ್ಲ, ಮೈದಾನದಲ್ಲಿ ತೆಗೆದುಕೊಂಡ ನಿರ್ಧಾರಗಳೇನು ಎನ್ನುವುದು ನನಗೆ ಗೊತ್ತಿದೆ ಎಂದು ರಹಾನೆ ತಿಳಿಸಿದ್ದಾರೆ.
ಕಳೆದ ವರ್ಷ 13 ಟೆಸ್ಟ್ ಪಂದ್ಯಗಳನ್ನಾಡಿರುವ ರಹಾನೆ 479 ರನ್ಗಳಿಸಿದ್ದಾರೆ. ಆದರೂ ಅವರು ಕೆಲವು ನಿರ್ಣಾಯಕ 50 , 40 ರನ್ಗಳಿಸಿದ್ದಾರೆ, ಆದರೆ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಅವರ ಶಾಟ್ ಸೆಲೆಕ್ಷನ್ ಕೂಡ ಟೀಕೆಗೆ ಗುರಿಯಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ 3 ಪಂದ್ಯಗಳಿಂದ ಅವರು ಕೇವಲ 136 ರನ್ಗಳಿಸಿದ್ದರು.
ನನ್ನ ಕೆರಿಯರ್ ಮುಗಿಯಿತು ಎನ್ನುವವರನ್ನು ನೋಡಿ ನಗುತ್ತೇನೆ: ನನ್ನ ವೃತ್ತಿ ಬದುಕು ಅಂತ್ಯಗೊಂಡಿದೆ ಎಂದು ಹೇಳುವವರನ್ನು ನೋಡಿ ನಾನು ನಗುತ್ತೇನೆ ಅಷ್ಟೆ. ಅದರ ಬಗ್ಗೆ ಆಳವಾಗಿ ಯೋಚಿಸಲು ಹೋಗಲ್ಲ. ಆಸ್ಟ್ರೇಲಿಯಾದಲ್ಲಿ ಏನಾಯಿತು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ. ಆಸ್ಟ್ರೇಲಿಯಾ ಸರಣಿಯ ನಂತರ ಮತ್ತು ಅದಕ್ಕೂ ಹಿಂದೆ ಟೆಸ್ಟ್ ಕ್ರಿಕೆಟ್ಗೆ ನನ್ನ ಕೊಡುಗೆ ಏನೂ ಎಂಬುದು ಎಲ್ಲರಿಗೂ ತಿಳಿದಿದೆ. ಕ್ರೀಡೆ ಬಗ್ಗೆ ತಿಳಿದಿರುವವರು, ಕ್ರೀಡೆಯನ್ನು ಪ್ರೀತಿಸುವವರು ಸಮಯೋಚಿತವಾಗಿ ಮಾತನಾಡುತ್ತಾರೆ" ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ರಣಜಿಯಲ್ಲಿ ತಮ್ಮ ಫಾರ್ಮ್ ಕಂಡುಕೊಳ್ಳುವ ಯತ್ನದಲ್ಲಿರುವ ರಹಾನೆ " ತಮಗೆ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿದೆ, ನಾನು ಉತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲೆ ವಿಶ್ವಾಸವಿದೆ ಮತ್ತು ನನ್ನಲ್ಲಿ ಸಾಕಷ್ಟು ಕ್ರಿಕೆಟ್ ಉಳಿದಿದೆ ಎಂದು ನಾನು ನಂಬುತ್ತೇನೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತ ತಂಡದಲ್ಲಿ ಅವಕಾಶವಿಲ್ಲ ಎನ್ನುವುದು ಖಚಿತ, ರಣಜಿಯಿಂದ ಒಬ್ಬಬ್ಬರಾಗಿ ಹೊರ ಬರುತ್ತಿರುವ ಸ್ಟಾರ್ ಕ್ರಿಕೆಟಿಗರು!