ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ತೀವ್ರ ಕುತೂಹಲ ಮೂಡಿಸಿದೆ. ಅರ್ಹತಾ ಪಂದ್ಯಗಳು ಜಾರಿಯಲ್ಲಿದ್ದು, ಗೆದ್ದ ಟಾಪ್ 4 ತಂಡಗಳು ಸೂಪರ್ 12 ಗೆ ಎಂಟ್ರಿ ನೀಡಲಿವೆ. ಅಲ್ಲದೇ, ಭಾರತ ಇದೇ 23 ರಿಂದ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ ಎದುರಿಸಲಿದೆ.
ಈ ಮಧ್ಯೆ ವಿಶ್ವಕಪ್ ವಶಕ್ಕಾಗಿ ಘಟಾನುಘಟಿ ತಂಡಗಳು ಕಣಕ್ಕಿಳಿದಿದ್ದು, ಯಾವ ತಂಡ ಚಾಂಪಿಯನ್ ಆಗಲಿದೆ ಎಂಬ ಚರ್ಚೆ ಜೋರಾಗಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಚಾಂಪಿಯನ್ ಪಟ್ಟಕ್ಕೆ ಬರುವ ಅಗ್ರ ನಾಲ್ಕು ತಂಡಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಇದರಲ್ಲಿ ಭಾರತದ ಜೊತೆಗೆ ಪಾಕಿಸ್ತಾನ ತಂಡ ಕೂಡ ಇದೆ. ಇದಲ್ಲದೇ, ಡಾರ್ಕ್ಹಾರ್ಸ್ ತಂಡಗಳನ್ನೂ ಅವರು ಹೆಸರಿಸಿದ್ದಾರೆ.
ಕ್ರಿಕೆಟ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಚಿನ್ ತೆಂಡೂಲ್ಕರ್, ಭಾರತ ಈ ಬಾರಿ ಚಾಂಪಿಯನ್ ಆಗಬೇಕು ಎಂದು ನಾನು ಬಯಸುತ್ತೇನೆ. ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಭಾರತಕ್ಕೆ ಸವಾಲಾಗಲಿವೆ. ಫೈನಲ್ ಸೆಣಸಾಟದಲ್ಲಿ ಈ ನಾಲ್ಕು ತಂಡಗಳು ಇರಲಿವೆ ಎಂದು ಭವಿಷ್ಯ ನುಡಿದಿದ್ದಾರೆ.
ಡಾರ್ಕ್ಹಾರ್ಸ್ ತಂಡಗಳಾದ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಈ ಬಾರಿ ಫೈನಲ್ಗೆ ಬರುವುದು ಕಷ್ಟ. ದಕ್ಷಿಣ ಆಫ್ರಿಕನ್ನರು ಉಳಿದ ತಂಡಗಳ ಪೈಪೋಟಿ ಮೀರಲಾರರು. ನ್ಯೂಜಿಲ್ಯಾಂಡ್ ಕೂಡ ಇದರಿಂದ ಭಿನ್ನವಾಗಿಲ್ಲ ಎಂದಿದ್ದಾರೆ.
ಭಾರತಕ್ಕೆ ಉತ್ತಮ ಅವಕಾಶವಿದೆ. ತಂಡ ಸಮತೋಲನದಿಂದ ಕೂಡಿದೆ. ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗಲು ಉತ್ತಮ ಸಂಯೋಜಿತ ತಂಡ ಸದ್ಯಕ್ಕಿದೆ. ತಂಡದ ಬಗ್ಗೆ ನಾನು ಸಾಕಷ್ಟು ಭರವಸೆ ಹೊಂದಿದ್ದೇನೆ ಎಂದು ತೆಂಡೂಲ್ಕರ್ ಹೇಳಿದರು.
ಬೂಮ್ರಾ ಗೈರು ಕಾಡುತ್ತೆ: ಭಾರತದ ಮುಂಚೂಣಿ ವೇಗಿ ಜಸ್ಪ್ರೀತ್ ಬೂಮ್ರಾ ಗೈರು ತಂಡವನ್ನು ಕಾಡಲಿದೆ ಎಂದು ಸಚಿನ್ ತೆಂಡೂಲ್ಕರ್ ಒಪ್ಪಿಕೊಂಡಿದ್ದಾರೆ. ಜಸ್ಪ್ರೀತ್ ಬೂಮ್ರಾ ಅತ್ಯುತ್ತಮ ವೇಗಿ. ಆತನ ಗೈರು ತಂಡದ ಮೇಲೆ ನಿಸ್ಸಂಶಯವಾಗಿ ಪರಿಣಾಮ ಬೀರುತ್ತದೆ. ಸ್ಟ್ರೈಕ್ ಮತ್ತು ವಿಕೆಟ್ ಪರಿಗಣಿಸಿ ಬೌಲಿಂಗ್ ಮಾಡುವ ಆತ, ಆಡುವ ಹನ್ನೊಂದರಲ್ಲಿ ಕಡ್ಡಾಯ ಇರಬೇಕಾದ ಬೌಲರ್ ಎಂದು ಹೇಳಿದ್ದಾರೆ.
ವಿಶ್ವಕಪ್ನಲ್ಲಿ ಬೂಮ್ರಾ ಸ್ಥಾನವನ್ನು ಮೊಹಮದ್ ಶಮಿ ತುಂಬಲಿದ್ದಾರೆ. ಆತನ ಸಾಮರ್ಥ್ಯ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸಾಬೀತಾಗಿದೆ. ಇದು ತಂಡಕ್ಕೂ ಪ್ಲಸ್ ಪಾಯಿಂಟ್ ಆಗಿದೆ. ಶಮಿ ಪ್ರದರ್ಶನ ಹೀಗೆಯೇ ಮುಂದುವರಿಯಲಿ ಎಂದು ಸಚಿನ್ ಕೋರಿದ್ದಾರೆ.
ಓದಿ: ಜನವರಿಯಲ್ಲಿ ನಡೆಯಬೇಕಿದ್ದ ಪಾಕ್-ವೆಸ್ಟ್ ಇಂಡೀಸ್ ಟಿ20 ಸರಣಿ 2024ಕ್ಕೆ ಮುಂದೂಡಿಕೆ: ಪಿಸಿಬಿ