ಮುಂಬೈ(ಮಹಾರಾಷ್ಟ್ರ): ಸುಮಾರು 10 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಅವಿಭಾಜ್ಯ ಅಂಗವಾಗಿರುವ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಸಿಎಸ್‌ಕೆ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅನ್‌ಫಾಲೋ ಮಾಡಿದೆ. ಮೇ 4ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗಾಯಕ್ಕೊಳಗಾದ ಜಡೇಜಾ ಈಗ ವಿರಾಮ ಪಡೆಯುತ್ತಿದ್ದಾರೆ.
ರವೀಂದ್ರ ಜಡೇಜಾ ಅವರು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಆದ್ದರಿಂದ ಭಾನುವಾರದಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದರು. ವೈದ್ಯಕೀಯ ಸಲಹೆಯ ಆಧಾರದ ಮೇಲೆ ಅವರನ್ನು ಐಪಿಎಲ್ ಸೀಸನ್‌ನ ಉಳಿದ ಪಂದ್ಯಗಳಿಂದ ಹೊರಗಿಡಲಾಗಿದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ಹೇಳಿಕೆ ನೀಡಿದೆ. ಆದರೆ, ಹಠಾತ್ ನಿರ್ಗಮನ ಕೆಲ ವದಂತಿಗಳನ್ನು ಹುಟ್ಟುಹಾಕಿದೆ. ತಂಡದಲ್ಲಿನ ಸಮಸ್ಯೆಗಳಿಂದಾಗಿ ಐಪಿಎಲ್ ತೊರೆದಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗಳಾಗುತ್ತಿವೆ.
ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಮತ್ತು ಧೋನಿ ಅವರು ಜಡೇಜಾ ಅವರೊಂದಿಗೆ ಚಿಲ್ಲರೆ ರಾಜಕೀಯ ಮಾಡಿದ್ದಾರೆ. ಧೋನಿ ಅವರು ಜಡೇಜಾ ಅವರನ್ನು ಬಲಿಪಶು ಮಾಡಿದ್ದಾರೆ. 8 ಪಂದ್ಯಗಳ ನಂತರ ಅವರನ್ನು ನಾಯಕತ್ವದಿಂದ ವಜಾಗೊಳಿಸಲಾಗಿದೆ. ಸಿಎಸ್‌ಕೆ ಇನ್ಸ್ಟಾದಲ್ಲಿ ಅವರನ್ನು ಅನ್‌ಫಾಲೋ ಮಾಡಿದೆ. ಈಗ ಐಪಿಎಲ್ ಆವೃತ್ತಿಯಿಂದ ಹೊರಗಿಟ್ಟು ಅವಮಾನ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.
ಅವರ ಮನಸ್ಸಿನಲ್ಲಿ ಯಾವುದೋ ಒಂದು ವಿಚಾರ ಕುದಿಯುತ್ತಿತ್ತು. ಅದು ಅವರು ನಾಯಕತ್ವವನ್ನು ತ್ಯಜಿಸಲು ಕಾರಣವಾಗಿರಬಹುದು. ಜಡೇಜಾ ಸಹಜವಾಗಿರಲಿಲ್ಲ. ಕೊನೆಯದಾಗಿ ಗಾಯದ ಸುದ್ದಿ ಬಂದಿದ್ದು, ನಿಗೂಢವಾಗಿ ಕಾಣುತ್ತದೆ ಎಂದು ಇನ್ನೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಹೇಳಿದ್ದಾರೆ.
ಜಡೇಜಾ ಐಪಿಎಲ್ 2022ರಲ್ಲಿ ದುಬಾರಿ ಆಟಗಾರನಾಗಿದ್ದು, 16 ಕೋಟಿಗೆ ಹರಾಜುಗೊಂಡಿದ್ದರು. ಐಪಿಎಲ್ ಪಂದ್ಯಾವಳಿಯ ಆರಂಭಕ್ಕೆ ಕೆಲವೇ ದಿನಗಳ ಮೊದಲು ಅವರು ತಂಡದ ನಾಯಕರಾಗಿ ನೇಮಕಗೊಂಡಿದ್ದರು. ಆದರೂ ಸಿಎಸ್‌ಕೆ ಎಂಟು ಪಂದ್ಯಗಳಲ್ಲಿ ಆರು ಪಂದ್ಯಗಳ್ಲಿ ಸೋಲನ್ನು ಅನುಭವಿಸಬೇಕಾಗಿ ಬಂತು. ಜಡೇಜಾ ಕೂಡಾ ಈ ಪಂದ್ಯಗಳಲ್ಲಿ ಫಾರ್ಮ್ ಕಳೆದುಕೊಂಡಿದ್ದರು. ಇಷ್ಟೇ ಅಲ್ಲದೇ ಧೋನಿ ಅವರಿಗೆ ಸಿಎಸ್‌ಕೆ ನಾಯಕತ್ವವನ್ನು ಹಸ್ತಾಂತರಿಸಿದರು. ಈ ನಾಯಕತ್ವ ಹಸ್ತಾಂತರ ವಿಚಾರವೇ ಈಗ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಯುಎಇ ಟಿ20 ಲೀಗ್: ಅಬು ಧಾಬಿ ಫ್ರಾಂಚೈಸಿ ಖರೀದಿಸಿದ ಕೋಲ್ಕತಾ ನೈಟ್‌ರೈಡರ್ಸ್