ಮೆಲ್ಬೋರ್ನ್: ನ.27ರಂದು ಆರಂಭವಾಗಲಿರುವ ಆಸ್ಟ್ರೇಲಿಯಾ-ಭಾರತ ನಡುವಿನ ಪಂದ್ಯಾವಳಿಗೆ ಈಗಾಗಲೇ ಉಭಯ ತಂಡಗಳು ನಿರಂತರ ಅಭ್ಯಾಸ ಆರಂಭಿಸಿವೆ.
ಈ ನಡುವೆ ಆಸೀಸ್ ಬಲಗೈ ವೇಗಿ ಕೇನ್ ರಿಚರ್ಡ್ಸನ್ ಟಿ-20 ಹಾಗೂ ಏಕದಿನ ಸರಣಿಯಿಂದ ಹಿಂದೆ ಸರಿದಿದ್ದಾರೆ. ರಿಚರ್ಡ್ಸನ್ ತನ್ನ ಕುಟುಂಬದೊಂದಿಗೆ ಸಮಯ ಕಳೆಯುವ ಸಲುವಾಗಿ ಕೆಲ ಪಂದ್ಯಾವಳಿಗೆ ಗೈರಾಗಲಿದ್ದು, ಇವರ ಸ್ಥಾನದಲ್ಲಿ ಬಲಗೈ ವೇಗಿ ಆ್ಯಂಡ್ರ್ಯೂ ಟೈ ಕಣಕ್ಕಿಳಿಯಲಿದ್ದಾರೆ.
ರಿಚರ್ಡ್ಸನ್ ದಂಪತಿಗೆ ಗಂಡು ಮಗು ಜನಿಸಿದ ಹಿನ್ನೆಲೆ ತಾಯಿ ಹಾಗೂ ಮಗನೊಂದಿಗೆ ಕಾಲ ಕಳೆಯುವ ಸಲುವಾಗಿ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿ ನೀಡಿದೆ.
ಇದು ರಿಚರ್ಡ್ಸನ್ ಅವರಿಗೆ ಬಹಳ ಕಷ್ಟಕರವಾದ ನಿರ್ಧಾರವಾಗಿತ್ತು. ಆದರೆ, ಟೀಂ ಮ್ಯಾನೇಜ್ಮೆಂಟ್ ಹಾಗೂ ಆಯ್ಕೆ ಸಮಿತಿ ಅವರಿಗೆ ಸಂಪೂರ್ಣ ಬೆಂಬಲ ನೀಡಲಾಯಿತು ಎಂದು ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಸದಸ್ಯ ಟ್ರೆವರ್ ಹೋನ್ಸ್ ತಿಳಿಸಿದ್ದಾರೆ.
ಕೇನ್ ಅವರ ಪತ್ನಿ ನೈಕಿ ಹಾಗೂ ಮಗನ ಜೊತೆ ಅಡಿಲೇಡ್ನಲ್ಲಿ ಉಳಿಯಲು ಇಚ್ಛಿಸಿದ್ದಾರೆ. ನಾವು ಯಾವಾಗಲೂ ಆಟಗಾರರು ಹಾಗೂ ಅವರ ಕುಟುಂಬಸ್ಥರ ಪರ ನಿಲ್ಲುತ್ತೇವೆ. ಅವರನ್ನು ನಾವು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇವೆ ಹಾಗೂ ಬೆಂಬಲಿಸುತ್ತೇವೆ ಎಂದರು.
ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಗೆ ತೆರಳಿದ್ದ ಟೈ ಇದುವರೆಗೆ 7 ಏಕದಿನ ಮತ್ತು 26 ಟಿ-20 ಪಂದ್ಯವನ್ನಾಡಿದ್ದಾರೆ. ಇದರಲ್ಲಿ ಕ್ರಮವಾಗಿ 12 ಮತ್ತು 37 ವಿಕೆಟ್ ಪಡೆದುಕೊಂಡಿದ್ದಾರೆ.
ಟೈ ಒಬ್ಬ ಉತ್ತಮ ಆಟಗಾರ. ಹಾಗೂ ಈ ಹಂತದಲ್ಲಿ ತಂಡ ಸೇರಿಕೊಳ್ಳಲು ಅರ್ಹ ಮತ್ತು ಸಮರ್ಥ ಆಟಗಾರ ಎಲ್ಲಾ ಪ್ರಕಾರಗಳಲ್ಲೂ ಆಡಿದ ಅನುಭವ ಅವರೊಂದಿಗಿದೆ ಎಂದು ಟ್ರೆವರ್ ತಿಳಿಸಿದ್ದಾರೆ.